ಹೈದರಾಬಾದ್ | ಚಿಲ್ಕೂರ್ ಬಾಲಾಜಿ ದೇವಸ್ಥಾನದ ಅರ್ಚಕರ ಮೇಲೆ ʼಹಿಂದೂ ಸೇನೆʼ ಕಾರ್ಯಕರ್ತರಿಂದ ಹಲ್ಲೆ

Photo | indianexpress
ಹೈದರಾಬಾದ್ : ತೆಲಂಗಾಣದ ಚಿಲ್ಕೂರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿಎಸ್ ರಂಗರಾಜನ್ ಅವರ ಮೇಲೆ ‘ಹಿಂದೂ ಸೇನೆ’ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ʼಹಿಂದೂ ಸೇನೆ’ ಸಂಘಟನೆಯ ವೀರ ರಾಘವ ರೆಡ್ಡಿ ಸೇರಿದಂತೆ ಕಾರ್ಯಕರ್ತರ ಗುಂಪು ಅರ್ಚಕ ಸಿಎಸ್ ರಂಗರಾಜನ್ ಅವರ ಮೇಲೆ ಹಲ್ಲೆ ನಡೆಸಿದೆ. ಕಪ್ಪು ಬಣ್ಣದ ಉಡುಪು ಹಾಗೂ ಕೇಸರಿ ಶಾಲು ತೊಟ್ಟಿದ್ದ ಜನರ ಗುಂಪು ರಂಗರಾಜನ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಥಳಿಸಿದ್ದಾರೆ. ತಮ್ಮ ಸಂಘಟನೆಗೆ ಹಣಕಾಸಿನ ನೆರವು ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಹೈದರಾಬಾದ್ ಹೊರವಲಯದಲ್ಲಿರುವ ಚಿಲ್ಕೂರ್ ಬಾಲಾಜಿ ದೇವಸ್ಥಾನದ ಹಿಂಭಾಗದಲ್ಲಿರುವ ಅರ್ಚಕರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಮೊಯಿನಾಬಾದ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ವೀರ ರಾಘವ ರೆಡ್ಡಿ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವೀರ ರಾಘವ ರೆಡ್ಡಿ ‘ರಾಮ ರಾಜ್ಯ’ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದ. ರಾಮರಾಜ್ಯ’ ಸ್ಥಾಪನೆಯೇ ನಮ್ಮ ಗುರಿ ಎಂದು ‘ಹಿಂದೂ ಸೇನೆ’ ಈ ಹಿಂದೆ ಹೇಳಿಕೊಂಡಿತ್ತು.
ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಹಲವರು ಸಿಎಸ್ ರಂಗರಾಜನ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದಾರೆ.