ದಿಲ್ಲಿಯಲ್ಲಿ ಒಗ್ಗಟ್ಟಿನ ನಾಟಕ, ರಾಜ್ಯಗಳಲ್ಲಿ ಕುಸ್ತಿ
‘ಇಂಡಿಯಾ’ ಮಿತ್ರಪಕ್ಷಗಳ ವಿರುದ್ಧ ನಕ್ವಿ ದಾಳಿ
Photo: twitter/naqvimukhtar
ಹೊಸದಿಲ್ಲಿ: ‘ಇಂಡಿಯಾ’ಮೈತ್ರಿಕೂಟದ ಪಕ್ಷಗಳು ರಾಜ್ಯಗಳಲ್ಲಿ ಪರಸ್ಪರ ಕುಸ್ತಿಯಲ್ಲಿ ತೊಡಗಿದ್ದರೂ ದಿಲ್ಲಿಯಲ್ಲಿ ಒಗ್ಗಟ್ಟಿನ ನಾಟಕವಾಡುತ್ತಿವೆ ಎಂದು ಹಿರಿಯ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಬುಧವಾರ ಟೀಕಿಸಿದರು.
ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನದಲ್ಲಿರುವ ಮಧ್ಯಪ್ರದೇಶದಲ್ಲಿ ಮಂಗಳವಾರ ‘ಇಂಡಿಯಾ ’ ಮೈತ್ರಿಕೂಟದ ಇನ್ನೊಂದು ಪಕ್ಷವಾಗಿರುವ ಜೆಡಿಯು ವಿಧಾನಸಭಾ ಚುನಾವಣೆಗಾಗಿ ತನ್ನ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ನಕ್ವಿಯವರ ಟೀಕೆ ಹೊರಬಿದ್ದಿದೆ.
ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು,ಅದು ಮೋಸಗಾರರ ಕೂಟವಾಗಿದೆ ಮತ್ತು ಅದರ ‘ಪ್ರೀತಿಯ ಅಂಗಡಿ’ಯು ‘ವಂಚನೆಯ ಸಾಧನ ’ ಗಳನ್ನು ಮಾರಾಟ ಮಾಡುತ್ತಿದೆ ಎಂದರು.
ಬೃಹತ್ ಜನಾದೇಶವನ್ನು ಗೆಲ್ಲಲು ಪ್ರತಿಪಕ್ಷಗಳ ತಾತ್ಕಾಲಿಕ ವ್ಯವಸ್ಥೆಗೆ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ವಿಶ್ವಾಸಾರ್ಹತೆ ಮತ್ತು ಸ್ವೀಕಾರಾರ್ಹತೆ 2024ರ ಲೋಕಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷ ಮೈತ್ರಿಕೂಟವನ್ನು ಮೂಲೆಗುಂಪು ಮಾಡಲಿವೆ ಎಂದರು.