ಹರ್ಯಾಣದ ಮಹಿಳಾ ರೈತರೊಂದಿಗೆ ಊಟ, ನೃತ್ಯದೊಂದಿಗೆ ಸಂವಾದ ನಡೆಸಿದ ಸೋನಿಯಾ ಗಾಂಧಿ
ಹೊಸದಿಲ್ಲಿ: ಜುಲೈ 8 ರಂದು ಹರ್ಯಾಣದ ಸೋನಿಪತ್ ನ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ರೈತರೊಂದಿಗೆ ಸಂವಾದ ನಡೆಸಿದ್ದರು. ಆ ಸಮಯದಲ್ಲಿ ರೈತರು ದಿಲ್ಲಿಯಲ್ಲಿರುವ ರಾಹುಲ್ ಗಾಂಧಿ ಅವರ ಮನೆಯನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇದೀಗ ರೈತ ಮಹಿಳೆಯರು ದಿಲ್ಲಿಗೆ ತೆರಳುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಲ್ಲದೆ, ಸೋನಿಯಾ ಗಾಂಧಿ ಅವರೊಂದಿಗೆ ಊಟ ಮಾಡಿ, ಅವರೊಂದಿಗೆ ಕುಣಿದು ಕುಪ್ಪಳಿಸುವ ಅವಕಾಶವನ್ನೂ ಪಡೆದರು.
ಕಾಂಗ್ರೆಸ್ ನಾಯಕಿ ರುಚಿರಾ ಚತುರ್ವೇದಿ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮಹಿಳಾ ರೈತರೊಂದಿಗೆ ನೃತ್ಯ ಮಾಡುವುದು ಕಂಡುಬಂದಿದೆ. ಇಬ್ಬರು ಮಹಿಳೆಯರು ಸೋನಿಯಾ ಗಾಂಧಿಯವರ ಕೈಗಳನ್ನು ಹಿಡಿದುಕೊಂಡು, ಅವರೊಂದಿಗೆ ನೃತ್ಯದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿರುವುದನ್ನು ವೀಡಿಯೊದಲ್ಲಿದೆ.
ಹರ್ಯಾಣದ ಮಹಿಳಾ ರೈತರು ರಾಹುಲ್ ಗಾಂಧಿ ಅವರ ಬಳಿ ದಿಲ್ಲಿ ಮನೆಯನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.ನನ್ನ ಮನೆಯನ್ನು ಸರಕಾರ ಕಿತ್ತುಕೊಂಡಿದೆ ಎಂದು ರಾಹುಲ್ ಹೇಳಿದ್ದರು.
ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್ ಗಾಂಧಿಯಿಂದ ದಿಲ್ಲಿಗೆ ಆಹ್ವಾನಿಸಲ್ಪಟ್ಟ ಹರ್ಯಾಣದ ಮಹಿಳಾ ರೈತರೊಂದಿಗೆ ಊಟ ಮಾಡಿದರು.
ಗಾಂಧಿ ಕುಟುಂಬವನ್ನು ಶ್ಲಾಘಿಸಿ ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.