ಜನಗಣತಿ ವಿಳಂಬದಿಂದ 14 ಕೋಟಿ ಮಂದಿಗೆ ಆಹಾರ ಭದ್ರತೆ ಪ್ರಯೋಜನ ನಿರಾಕರಣೆ: ಸೋನಿಯಾ ಗಂಭೀರ ಆರೋಪ

PC: x.com/thetribunechd
ಹೊಸದಿಲ್ಲಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಈ ಬಾರಿ ನಾಲ್ಕು ವರ್ಷ ವಿಳಂಬವಾಗಿರುವುದರಿಂದ ದೇಶದ 14 ಕೋಟಿ ಮಂದಿಗೆ ಆಹಾರ ಭದ್ರತೆ ಪ್ರಯೋಜನ ನಿರಾಕರಿಸಿದಂತಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೋಮವಾರ ರಾಜ್ಯಸಭೆಯಲ್ಲಿ ಗಂಭೀರ ಆರೋಪ ಮಾಡಿದರು.
ಒಂದೂವರೆ ದಶಕದಷ್ಟು ಹಳೆಯದಾದ 2011ರ ಜನಗಣತಿ ಆಧಾರದಲ್ಲೇ ಇದುವರೆಗೂ ಆಹಾರ ಭದ್ರತೆ ಕಾಯ್ದೆಯಡಿ ಪ್ರಯೋಜನ ಪಡೆಯುವ ಫಲಾನುಭವಿಗಳ ಕೋಟಾ ನಿಗದಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂಸತ್ತಿನ ಮೇಲ್ಮನೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾಗಾಂಧಿ, "2013ರ ಸೆಪ್ಟೆಂಬರ್ ನಲ್ಲಿ ಯುಪಿಎ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ದೇಶದ ಬಡವರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ. ಕೋವಿಡ್-19 ಸಂದರ್ಭದಲ್ಲಿ ಲಕ್ಷಾಂತರ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವಲ್ಲಿ ಕಾಯ್ದೆ ಪ್ರಮುಖ ಪಾತ್ರ ವಹಿಸಿದೆ" ಎಂದರು.
"ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾದ ಜನಗಣತಿ ಕಾರ್ಯ ನಾಲ್ಕು ವರ್ಷ ವಿಳಂಬವಾಗಿದೆ. 2021ರಲ್ಲಿ ನಡೆಯಬೇಕಾದ ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಈ ವರ್ಷ ಕೂಡಾ ಪರಿಷ್ಕೃತ ಜನಗಣತಿ ನಡೆಯುವುದಿಲ್ಲ ಎನ್ನುವುದು ಬಜೆಟ್ ಅಂಶಗಳಿಂದ ತಿಳಿದು ಬರತ್ತದೆ. ಸುಮಾರು 14 ಕೋಟಿ ಅರ್ಹ ಫಲಾನುಭವಿಗಳಿಗ ಎನ್ಎಫ್ಎಸ್ಎ ಕಾಯ್ದೆಯಡಿ ಹಕ್ಕು ನಿರಾಕರಿಸಲಾಗುತ್ತಿದೆ" ಎಂದು ವಿಶ್ಲೇಷಿಸಿದರು.
ಎನ್ಎಫ್ಎಸ್ಎ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಶೇಕಡ 75ರಷ್ಟು ಮತ್ತು ನಗರಗಳ ಶೇಕಡ 50ರಷ್ಟು ಮಂದಿಗೆ ಪಡಿತರವನ್ನು ರಿಯಾಯ್ತಿ ದರದಲ್ಲಿ ನೀಡಲಾಗುತ್ತಿದ್ದು, 2011ರ ಜನಗಣತಿ ಅನ್ವಯ ಸುಮಾರು 81.4 ಕೋಟಿ ಈ ಸೌಲಭ್ಯಕ್ಕೆ ಅರ್ಹತೆ ಹೊಂದಿದ್ದಾರೆ.