ದಿಲ್ಲಿ ಸಚಿವೆ ಅತಿಶಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್
ಅತಿಶಿ, ಅಖಿಲೇಶ್ ಯಾದವ್ | PC : PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಪಾಲಿನ ನೀರನ್ನು ಬಿಡುಗಡೆ ಮಾಡಬೇಕು ಎಂದು ಹರ್ಯಾಣ ಸರಕಾರವನ್ನು ಆಗ್ರಹಿಸಿ ಆಮರಣಾಂತ ಉಪವಾಸ ಕೈಗೊಂಡು, ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿರುವ ದಿಲ್ಲಿ ಸಚಿವೆ ಅತಿಶಿ ಅವರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಭೇಟಿ ಮಾಡಿ, ಅವರ ಆರೋಗ್ಯವನ್ನು ವಿಚಾರಿಸಿದರು.
ರಾಷ್ಟ್ರ ರಾಜಧಾನಿ ದಿಲ್ಲಿಯು ಈ ಬಾರಿಯ ಬಿಸಿಲಿನ ಝಳದಿಂದ ತೀವ್ರ ನೀರಿನ ಕ್ಷಾಮಕ್ಕೆ ತುತ್ತಾಗಿದೆ. ಹೀಗಾಗಿ ಹರ್ಯಾಣ ರಾಜ್ಯವು ದಿಲ್ಲಿ ಪಾಲಿನ ನೀರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ದಿಲ್ಲಿಯ ಆಪ್ ಸರಕಾರವು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದ ಆದೇಶದ ಹೊರತಾಗಿಯೂ ಹರ್ಯಾಣ ಸರಕಾರವು ಪ್ರತಿ ನಿತ್ಯ ಒಂದು ಲಕ್ಷ ಗ್ಯಾಲನ್ ನೀರಿನಿಂತಲೂ ಕಡಿಮೆ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ ಸಚಿವೆ ಅತಿಶಿ ಜೂನ್ 21ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದರಿಂದ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ, ಅವರನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಿಲ್ಲಿ ಸರಕಾರದಲ್ಲಿ ಹಲವು ಖಾತೆಗಳನ್ನು ಹೊಂದಿರುವ ಅತಿಶಿಯನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮಂಗಳವಾರ ವೈದ್ಯರು ತಿಳಿಸಿದ್ದರು.