ರಾಜ್ಯಸಭಾ ಚುನಾವಣೆ: ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ರಾಜಿನಾಮೆ ನೀಡಿದ ಎಸ್ಪಿ ಶಾಸಕ ಮನೋಜ್ ಪಾಂಡೆ
ಎಸ್ಪಿ ಶಾಸಕ ಮನೋಜ್ ಪಾಂಡೆ (Photo: indiatoday.in)
ಲಕ್ನೊ: ರಾಜ್ಯಸಭಾ ಚುನಾವಣೆಗೆ ಮತದಾನ ಪ್ರಾರಂಭವಾಗುವುದಕ್ಕೂ ಮುನ್ನ ಎಸ್ಪಿ ಶಾಸಕ ಮನೋಜ್ ಪಾಂಡೆ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದು, ಚುನಾವಣೆಯಲ್ಲಿ ಅಡ್ಡ ಮತದಾನವಾಗುವ ಭೀತಿ ಕಾಡುತ್ತಿದೆ.
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ತಮ್ಮ ನಿವಾಸದಲ್ಲಿ ಮತದಾನದ ಹಿಂದಿನ ದಿನ ಕರೆದಿದ್ದ ಔತಣಕೂಟಕ್ಕೆ ಪಕ್ಷದ ಎಂಟು ಮಂದಿ ಶಾಸಕರು ಗೈರಾಗಿರುವುದು ಈ ವದಂತಿಗಳಿಗೆ ಕಾರಣವಾಗಿದೆ.
ಹತ್ತು ಸ್ಥಾನಗಳ ಪೈಕಿ ಬಿಜೆಪಿ ಮೊದಲು ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು ಹಾಗೂ ಸಮಾಜವಾದಿ ಪಕ್ಷ ಮೂರು ಸ್ಥಾನಗಳಿಗೆ ಸ್ಪರ್ಧಿಸಿತ್ತು. ಆದರೆ ಬಿಜೆಪಿ ಕೊನೆಕ್ಷಣದಲ್ಲಿ ಮಾಜಿ ಸಂಸದ ಸಂಜಯ್ ಸೇಥ್ ಅವರನ್ನು ಎಂಟನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಸಮಾಜವಾದಿ ಪಕ್ಷದಿಂದ ಅಖಿಲೇಶ್ ಔತಣಕೂಟಕ್ಕೆ ಗೈರುಹಾಜರಾದ ರಾಕೇಶ್ ಪಾಂಡೆ, ಅಭಯ್ ಸಿಂಗ್, ಮನೋಜ್ ಪಾಂಡೆ, ರಾಕೇಶ್ ಪ್ರತಾಪ್ ಸಿಂಗ್, ವಿನೋದ್ ಚತುರ್ವೇದಿ, ಮಹಾರಾಜ್ ಪ್ರಜಾಪತಿ, ಪೂಜಾ ಪಾಲ್ ಮತ್ತು ಪಲ್ಲವಿ ಪಟೇಲ್ ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.