2011ರ ದಾವೂದ್ ಇಬ್ರಾಹಿಂ ಸಹೋದರನ ಚಾಲಕನ ಹತ್ಯೆ ಪ್ರಕರಣ: ಗ್ಯಾಂಗ್ಸ್ಟರ್ ಛೋಟಾ ರಾಜನ್ ಖುಲಾಸೆ

Photo : PTI
ಮುಂಬೈ: 2011ರಲ್ಲಿ ನಡೆದಿದ್ದ ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರನ ಚಾಲಕ ಹಾಗೂ ಅಂಗರಕ್ಷಕನ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗ್ಯಾಂಗ್ ಸ್ಟರ್ ಛೋಟಾ ರಾಜನ್ ನನ್ನು ಸೋಮವಾರ ಮುಂಬೈನ ವಿಶೇಷ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ನಿಯೋಜಿತರಾಗಿರುವ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್, ಛೋಟಾ ರಾಜನ್ ನನ್ನು ಖುಲಾಸೆಗೊಳಿಸಿದರು. ಆದರೆ, ಈ ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಸದ್ಯ, ದಿಲ್ಲಿಯ ತಿಹಾರ್ ಜೈಲಿನಲ್ಲಿಡಲಾಗಿರುವ ಛೋಟಾ ರಾಜನ್ ನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದೆದುರು ಹಾಜರುಪಡಿಸಲಾಯಿತು. ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಆತನಿಗೆ ಮಾಹಿತಿ ನೀಡಲಾಯಿತು.
“ಒಂದು ವೇಳೆ ಛೋಟಾ ರಾಜನ್ ಮತ್ಯಾವುದೇ ಅಪರಾಧ ಅಥವಾ ಪ್ರಕರಣದಲ್ಲಿ ಬೇಕಿಲ್ಲದದಿದ್ದರೆ, ಈ ಆದೇಶದನ್ವಯ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
ಮೇ 7, 2011ರಂದು ದೇಶ ಭ್ರಷ್ಟ ಭೂಗತ ದೊರೆ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಬ್ರಾಹಿಂ ಶೇಖ್ ಕಸ್ಕರ್ ನ ಚಾಲಕ ಹಾಗೂ ಅಂಗರಕ್ಷಕ ಆರಿಫ್ ಅಬುನಕರ್ ಸಯ್ಯದ್ ಮೇಲೆ ಇಬ್ಬರು ಗುಂಡಿನ ದಾಳಿ ನಡೆಸಿದ್ದರು. ಪೊಲೀಸರ ಪ್ರಕಾರ, ಛೋಟಾ ರಾಜನ್ ಸೂಚನೆಯ ಮೇರೆಗೆ ಈ ಹತ್ಯೆ ನಡೆಸಲಾಗಿತ್ತು. ನಂತರ, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಹತ್ಯೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ಹಾಗೂ ಮೋಕಾ ಕಾಯ್ದೆ ಮತ್ತು ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಛೋಟಾ ರಾಜನ್, ಪತ್ರಕರ್ತ ಜ್ಯೋತಿರ್ಮೋಯ್ ಡೇ ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವುದರಿಂದ ಜೈಲಿನಲ್ಲೇ ಉಳಿಯಲಿದ್ದಾನೆ. ಇನ್ನಿತರ ಕ್ರಿಮಿನಲ್ ಪ್ರಕರಣಗಳಲ್ಲೂ ಆತ ವಿಚಾರಣೆ ಎದುರಿಸುತ್ತಿದ್ದಾನೆ.