ಬಿಹಾರಕ್ಕೆ ವಿಶೇಷ ಸ್ಥಾನಮಾನ: ಜೆಡಿಯು ಬೇಡಿಕೆಗೆ ಕೇಂದ್ರ ನಕಾರ
PC: PTI
ಹೊಸದಿಲ್ಲಿ: ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಎನ್ ಡಿಎ ಮಿತ್ರಪಕ್ಷವಾದ ಸಂಯುಕ್ತ ಜನತಾದಳ ಮುಂದಿಟ್ಟಿದ್ದ ಬೇಡಿಕೆಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಆಂಧ್ರಪ್ರದೇಶಕ್ಕೆ ಇಂಥದ್ದೇ ಸ್ಥಾನಮಾನಕ್ಕೆ ಆಗ್ರಹಿಸಿರುವ ತೆಲುಗುದೇಶಂ ಪಕ್ಷಕ್ಕೆ ಕೂಡಾ ಇದು ಅನ್ವಯವಾಗುವ ಸಾಧ್ಯತೆ ಇದೆ.
ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ಯೋಜನಾ ಆಯೋಗ ಗುರುತಿಸಿಸರುವ ವಿಶೇಷ ವರ್ಗದಡಿಯಲ್ಲಿ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ನೀಡಲು ಅವಕಾಶವಿದ್ದು, ಇದು ರಾಜ್ಯಗಳಿಗೆ ನೆರವಾಗಬಹುದು ಎಂದು ಎಲ್ ಜೆಪಿಯ ಶಾಂಭವಿ ಚೌಧರಿ ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಲೋಕಸಭೆಯಲ್ಲಿ ಜೆಡಿಯು ಹಾಗೂ ತೆಲುಗುದೇಶಂ ದೊಡ್ಡ ಸಂಖ್ಯೆಯ ಸಂಸದರನ್ನು ಹೊಂದಿದ್ದರೂ, ಕೇಂದ್ರ ಸರ್ಕಾರ ತನ್ನ ನಿಲುವನ್ನು ಪುನರುಚ್ಚರಿಸಿರುವುದರಿಂದ ಸದ್ಯಕ್ಕೆ ಯಾವುದೇ ರಾಜಕೀಯ ಏರು ಪೇರುಗಳ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ, ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಈಡೇರಿಸುವ ಬದಲು ಒಟ್ಟು ಆದಾಯದಲ್ಲಿ ರಾಜ್ಯಗಳ ಪಾಲನ್ನು ಶೇಕಡ 32ರಿಂದ 42ಕ್ಕೆ ಹೆಚ್ಚಿಸಲಾಗಿದೆ. ಜತೆಗೆ ಈ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳಿಗೆ ತೆರಿಗೆ ರಿಯಾಯ್ತಿಗಳು ನೀಡುವುದು ಮುಂತಾದ ಉತ್ತೇಜಕಗಳಿಂದ ಈ ರಾಜ್ಯಗಳಿಗೆ ನೆರವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಬಿಜೆಪಿ ಜತೆಗಿನ ಮಾತುಕತೆ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಉದ್ದೇಶಿತ ರಾಜಧಾನಿ ಅಮರಾವತಿಯ ಅಭಿವೃದ್ಧಿಗೆ ಮತ್ತು ಪೋಲಾವರಂ ಅಣೆಕಟ್ಟು ಯೋಜನೆಗೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪಕ್ಷದ ಪ್ರತಿನಿಧಿ ಲಾವು ಶ್ರೀಕೃಷ್ಣ ದೇವರಾಯಲು ಈ ವಿಷಯವನ್ನು ಪ್ರಸ್ತಾಪಿಸಿಲ್ಲ.