ಭಾರತೀಯ ಕುಸ್ತಿ ಫೆಡರೇಶನ್ ಅಮಾನತು ಆದೇಶ ಹಿಂಪಡೆದ ಕ್ರೀಡಾ ಸಚಿವಾಲಯ

ಸಂಜಯ್ ಸಿಂಗ್ Photo |NDTV
ಹೊಸದಿಲ್ಲಿ : ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮೇಲಿನ ಅಮಾನತನ್ನು ಕ್ರೀಡಾ ಸಚಿವಾಲಯ ಹಿಂತೆಗೆದುಕೊಂಡಿದೆ. ಇದರಿಂದ ದೇಶೀಯ ಪಂದ್ಯಾವಳಿಗಳನ್ನು ಆಯೋಜಿಸಲು ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ರಾಷ್ಟ್ರೀಯ ತಂಡಗಳ ಆಯ್ಕೆಗೆ ಡಬ್ಲ್ಯುಎಫ್ಐಗೆ ಅನುಮತಿ ದೊರೆತಿದೆ.
ಸಂಜಯ್ ಸಿಂಗ್ ನೇತೃತ್ವದ ಸಮಿತಿಯು 2023ರ ಡಿಸೆಂಬರ್ 21ರಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆ ಬಳಿಕ ಸಮಿತಿಯು 15 ಮತ್ತು 19 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ ದಿನಾಂಕ ಘೋಷಣೆ ಮಾಡಿತ್ತು. ಸಮಿತಿಯ ಈ ಕ್ರಮವು ಆತುರದಿಂದ ಕೂಡಿದ್ದು ನಿಯಮಬಾಹಿರವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಎನ್ನಲಾಗಿರುವ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿತ್ತು. ಹೊಸ ಮಂಡಳಿಯು ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ಕ್ರೀಡಾ ಸಂಹಿತೆಗೆ ಅನುಗುಣವಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕ್ರೀಡಾ ಸಚಿವಾಲಯ ಸಮಿತಿಯನ್ನು ಅಮಾನತುಗೊಳಿಸಿತ್ತು.