ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ರಾಜ್ಯದ ಕಾಂಗ್ರೆಸ್ ಸರಕಾರ ನೆರವಾಗಿದೆ: ಪ್ರಧಾನಿ ಮೋದಿ
“ರಾಜ್ಯದಲ್ಲಿ ಮೈತ್ರಿ ಸರಕಾರವಿದ್ದ ದಿನಗಳಿಂದಲೇ ಈ ಕೃತ್ಯ ನಡೆದಿದೆ”
ಪ್ರಧಾನಿ ಮೋದಿ | PC : PTI
ಹೊಸದಿಲ್ಲಿ: ಪ್ರಜ್ವಲ್ ಅವರಿಗೆ ದೇಶದಿಂದ ಹೊರಗಡೆ ಹೋಗಲು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತೃತ್ವದ ಸರಕಾರವು ಅನುವು ಮಾಡಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಟೈಮ್ಸ್ ನೌ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ವೀಡಿಯೊ ಪ್ರಕರಣವು ಒಂದು ದಿನದಲ್ಲಿ ನಡೆದಿರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದ ದಿನಗಳಿಂದಲೇ ನಡೆದಿದೆ ಎಂದು ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸಂದರ್ಶನದ ಪೂರ್ಣ ವೀಡಿಯೊ ಹಂಚಿಕೊಂಡಿರುವ ಪ್ರಧಾನಿಯವರು ಹಂಚಿಕೊಂಡಿದ್ದಾರೆ. ಸಂದರ್ಶನದ 51:20 ನಿಮಿಷದಿಂದ 54:10ದ ವರೆಗಿನ ಕ್ಲಿಪ್ ನಲ್ಲಿ ಪ್ರಜ್ವಲ್ ರೇವಣ್ಣ ಕುರಿತು ಪ್ರಧಾನಿ ಮಾತನಾಡಿದ್ದಾರೆ.
ಅವರು ಅಧಿಕಾರದಲ್ಲಿದ್ದಾಗ ಈ ವಿಡಿಯೊಗಳನ್ನು ಸಂಗ್ರಹಿಸಿಟ್ಟಿದ್ದರು. ಪ್ರಜ್ವಲ್ ಅವರನ್ನು ದೇಶದಿಂದ ಹೊರಗೆ ಕಳುಹಿಸಿದ ನಂತರ ವಿಡಿಯೊಗಳನ್ನು ಬಿಡುಗಡೆ ಮಾಡಿದರು. ಈ ಬೆಳವಣಿಗೆಗಳು ಬಹಳ ಅನುಮಾನಾಸ್ಪದವಾಗಿದೆ. ರಾಜ್ಯ ಸರಕಾರದ ಬಳಿ ಮಾಹಿತಿಯಿದ್ದರೆ, ವಿಮಾನ ನಿಲ್ದಾಣಗಳಲ್ಲಿ ನಿಗಾ ಇರಿಸಬೇಕಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
ರಾಜ್ಯ ಸರಕಾರವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೇಂದ್ರ ಸರಕಾರಕ್ಕೂ ಮಾಹಿತಿ ನೀಡಲಿಲ್ಲ. ಇದೊಂದು ರಾಜಕೀಯ ಆಟವಷ್ಟೇ. ಆದರೂ ಅಪರಾಧಿಗಳನ್ನು ಬಿಡಬಾರದು. ನಮ್ಮ ದೇಶದಲ್ಲಿ ಇಂತಹ ಕೃತ್ಯಗಳಿಗೆ ಅಂತ್ಯ ಹಾಡಬೇಕು. ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆತಂದು ಶಿಕ್ಷಿಸಬೇಕು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.