ಸಂಸತ್ ಕಾನೂನು ಹೊರತುಪಡಿಸಿ ಕೇಂದ್ರ, ರಾಜ್ಯ ಸರಕಾರಕ್ಕೆ ಪರಿಶಿಷ್ಟರ ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರವಿಲ್ಲ : ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ | PTI
ಹೊಸದಿಲ್ಲಿ : ಸಂಸತ್ ಕಾನೂನು ರೂಪಿಸದೆ ಇದ್ದಲ್ಲಿ, ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಸಂವಿಧಾನದ 341ರ ವಿಧಿಯಡಿ ಪ್ರಕಟವಾದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮಾರ್ಪಾಡುಗಳನ್ನು ಮಾಡುವ ಅರ್ಹತೆ ಅಥವಾ ಅಧಿಕಾರವಿರುವುದಿಲ್ಲವೆಂದು ಸುಪ್ರೀಂಕೋರ್ಟ್ ಸೋಮವಾರ ಘೋಷಿಸಿದೆ.
ಅತ್ಯಂತ ಹಿಂದುಳಿದ ಜಾತಿ ‘ತಂತಿ -ತಂತ್ವಾ’ವನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ‘ಪಾನ್/ಸಾವಸಿ’ ಜೊತೆ ವಿಲೀನಗೊಳಿಸಿ, 2015ರ ಜುಲೈ 1ರಂದು ಬಿಹಾರ ಸರಕಾರ ಅಂಗೀಕರಿಸಿದ ನಿರ್ಣಯವು ಅಕ್ರಮ ಹಾಗೂ ತಪ್ಪಿನಿಂದ ಕೂಡಿದೆ ಎಂದು ಅಭಿಪ್ರಾಯಿಸಿತ್ತು.
ಹಾಲಿ ಪ್ರಕರಣದಲ್ಲಿ , ಬಿಹಾರ ಸರಕಾರದ ನಡೆಯು ದುರುದ್ದೇಶದಿಂದ ಕೂಡಿದೆ ಹಾಗೂ ಸಂವಿಧಾನದ ನಿಯಮಗಳ ಉಲ್ಲಂಘನೆಯಾಗಿದೆ. ರಾಜ್ಯ ಸರಕಾರ ಎಸಗಿದ ಕಿಡಿಗೇಡಿತನಕ್ಕೆ ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಸಂವಿಧಾನದ 341ನೇ ವಿಧಿಯಡಿ ಪಟ್ಟಿಮಾಡಲ್ಪಟ್ಟ ಪರಿಶಿಷ್ಟ ಜಾತಿಗಳ ಸದಸ್ಯರಿಗೆ ಅವಕಾಶಗಳನ್ನು ವಂಚಿಸುವುದು ಗಂಭೀರವಾದ ವಿಷಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಸಿತು.
ಸಂವಿಧಾನದ 341ನೇ ವಿಧಿಯು ಕೇವಲ ಜಾತಿಗಳು, ಜನಾಂಗಗಳು ಅಥವಾ ಬುಡಕಟ್ಟು ಜನರ ವಿಷಯಗಳನ್ನು ಮಾತ್ರವಲ್ಲ , ಜಾತಿಗಳು, ಜನಾಂಗಗಳು ಅಥವಾ ಬುಡಕಟ್ಟುಗಳ ಒಳಪಂಗಡಗಳ ವಿಷಯಗಳನ್ನು ಕೂಡಾ ನಿರ್ವಹಿಸುತ್ತದೆ.
ಆದುದರಿಂದ ಯಾವುದೇ ಜಾತಿ, ಜನಾಂಗ ಅಥವಾ ಬುಡಕಟ್ಟಿನ ಸೇರ್ಪಡೆ ಅಥವಾ ಬೇರ್ಪಡೆಯಲ್ಲಿ ಬದಲಾವಣೆಯನ್ನು ಮಾಡಬೇಕಾದರೆ, ಅದು ಸಂಸತ್ನಲ್ಲಿ ರೂಪಿಸಲಾದ ಕಾನೂನಿನ ಮೂಲಕವೇ ಆಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಿಸಿತು. ತಂತಿ-ತಂತ್ವಾ ಸಮುದಾಯವನ್ನು ಪಾನ್/ಸಾವಸಿ ಜಾತಿಗೆ ಸೇರ್ಪಡೆಗೊಳಿಸುವ 2015ರ ಅಧಿಸೂಚನೆಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಯನ್ನು ತಳ್ಳಿಹಾಕಿದ ಪಾಟ್ನಾ ಹೈಕೋಟ್ಟ್ ಆದೇಶದ ವಿರುದ್ಧ ಡಾ. ಭೀಮರಾವ್ಅಂಬೇಡ್ಕರ್ ವಿಚಾರ ಮಂಚ್ ಬಿಹಾರ ಹಾಗೂ ಆಶೀಶ್ರಜಾಕ್ ಸಲ್ಲಿಸಿದ ಅರ್ಜಿಯ ಆಲಿಕೆಗೆ ನ್ಯಾಯಾಲಯ ಅನುಮತಿ ನೀಡಿತು.