‘ಮೈ ಲಾರ್ಡ್’ ಅನ್ನುವುದನ್ನು ನಿಲ್ಲಿಸಿದರೆ ನನ್ನ ವೇತನದ ಅರ್ಧ ಭಾಗವನ್ನು ನಿಮಗೆ ನೀಡುತ್ತೇನೆ ಎಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ
ಹೊಸದಿಲ್ಲಿ: ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ವಕೀಲರು ಪದೇ ಪದೇ ‘ಮೈ ಲಾರ್ಡ್’, ‘ಯುವರ್ ಲಾರ್ಡ್ ಶಿಪ್ಸ್’ ಎಂಬ ಪದಗಳನ್ನು ಬಳಸುವುದರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಎಷ್ಟು ಬಾರಿ ನೀವು ‘ಮೈ ಲಾರ್ಡ್ಸ್’ ಎಂದು ಸಂಬೋಧಿಸುತ್ತೀರಿ? ಒಂದು ವೇಳೆ ನೀವಿದನ್ನು ನಿಲ್ಲಿಸಿದರೆ ನಾನು ನಿಮಗೆ ನನ್ನ ವೇತನದ ಅರ್ಧ ಭಾಗವನ್ನು ನೀಡುತ್ತೇನೆ” ಎಂದು ಬುಧವಾರ ನ್ಯಾ. ಎಸ್.ಬೋಪಣ್ಣ ನೇತೃತ್ವದ ನ್ಯಾಯಪೀಠವು ಸಾಮಾನ್ಯ ವಿಷಯಗಳ ಕುರಿತು ವಿಚಾರಣೆ ನಡೆಸುತ್ತಿದ್ದಾಗ ಆ ನ್ಯಾಯಪೀಠದ ಭಾಗವಾಗಿದ್ದ ಪಿ.ಎಸ್.ನರಸಿಂಹ ಅವರು ಹಾಗೆ ಸಂಬೋಧಿಸಿದ ಹಿರಿಯ ವಕೀಲರೊಬ್ಬರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾದ ಮಂಡಿಸುವ ಸಮಯದಲ್ಲಿ ಎಲ್ಲ ವಕೀಲರು ನ್ಯಾಯಾಧೀಶರನ್ನುದ್ದೇಶಿಸಿ ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್ ಶಿಪ್ಸ್’ ಎಂದು ಉಲ್ಲೇಖಿಸುವುದು ಸಾಮಾನ್ಯವಾಗಿದೆ. ಈ ರೂಢಿಯನ್ನು ವಿರೋಧಿಸುತ್ತಿರುವವರ ಪ್ರಕಾರ, ಈ ಸಂಬೋಧನೆಯು ವಸಾಹತುಶಾಹಿ ಕಾಲಘಟ್ಟದ್ದು, ಗುಲಾಮಗಿರಿಯ ಸಂಕೇತವಾಗಿದೆ ಎನ್ನುತ್ತಾರೆ.
“ನೀವೇಕೆ ಅದರ ಬದಲು ಸರ್ ಎಂದು ಬಳಸಬಾರದು?” ಎಂದು ಪ್ರಶ್ನಿಸಿರುವ ನ್ಯಾ. ನರಸಿಂಹ, ಇಲ್ಲವಾದರೆ ಹಿರಿಯ ವಕೀಲರು ಎಷ್ಟು ಬಾರಿ ‘ಮೈ ಲಾರ್ಡ್ಸ್’ ಎಂದು ಸಂಬೋಧಿಸುತ್ತಾರೆ ಎಂದು ಲೆಕ್ಕ ಹಾಕಲು ಪ್ರಾರಂಭಿಸುತ್ತೇನೆ” ಎಂದು ನಗೆಚಟಾಕಿ ಹಾರಿಸಿದ್ದಾರೆ.
ಇನ್ನು ಮುಂದೆ ನ್ಯಾಯಾಧೀಶರನ್ನುದ್ದೇಶಿಸಿ ‘ಮೈ ಲಾರ್ಡ್ಸ್’ ಮತ್ತು ‘ಯುವರ್ ಲಾರ್ಡ್ ಶಿಪ್ಸ್’ ಎಂದು ವಕೀಲರು ಸಂಬೋಧಿಸಕೂಡದು ಎಂದು 2016ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಗೊತ್ತುವಳಿ ಅಂಗೀಕರಿಸಿದ್ದರೂ, ಅದನ್ನು ರೂಢಿಯಲ್ಲಿ ಅನುಸರಿಸುತ್ತಿಲ್ಲ.