ಅಂಗವಿಕಲ ಪಿಎಚ್ಡಿ ವಿದ್ಯಾರ್ಥಿ ಮೇಲೆ ಎಬಿವಿಪಿಗರಿಂದ ಥಳಿತ: ಆರೋಪ
PHOTO : INDIATODAY
ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಪಿಎಚ್ಡಿ ಮಾಡುತ್ತಿರುವ ಅಂಗವಿಕಲ ವಿದ್ಯಾರ್ಥಿಯ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಎನ್ಎಸ್ಯುಐ ಕಾರ್ಯಕರ್ತ ಆಗಿರುವ ವಿದ್ಯಾರ್ಥಿ ಫಾರೂಕ್ ಆಲಂ ಥಳಿತಕ್ಕೊಳಗಾದವರು. ಎಬಿವಿಪಿ ಸದಸ್ಯರು ಬುಧವಾರ ಕ್ಯಾಂಪಸ್ನಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕ್ಯಾಂಪಸ್ನಲ್ಲಿರುವ ಕಾವೇರಿ ಹಾಸ್ಟೆಲ್ಗೆ ಭೇಟಿ ನೀಡಿದ್ದ ಕೆಲವು ABVP ಸದಸ್ಯರು ಆಲಂ ಮೇಲೆ ಹಲ್ಲೆ ನಡೆಸಿದ್ದಾರೆ. ಆಲಂನ್ನು ಎಬಿವಿಪಿ ಸದಸ್ಯರು ಚಿತ್ರಹಿಂಸೆಗೆ ಒಳಪಡಿಸಿದ್ದು, ನೆಲದ ಮೇಲೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಥಳಿತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಲಂ ನಾಲ್ಕು ವರ್ಷಗಳ ಹಿಂದೆ ಶುಲ್ಕ ಹೆಚ್ಚಳ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ನಂತರ, ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಅಲ್ಲದೆ, ಹಾಸ್ಟೆಲ್ ಅನ್ನು ಖಾಲಿ ಮಾಡುವಂತೆ ಆದೇಶವನ್ನು ಹೊರಡಿಸಲಾಗಿತ್ತು. ಆದಾಗ್ಯೂ, ಈ ನಿರ್ಧಾರ ನ್ಯಾಯಾಲಯದಲ್ಲಿ ಪರಿಶೀಲನೆಯಲ್ಲಿದೆ.
"ಇಂದು ಕಾವೇರಿ ಹಾಸ್ಟೆಲ್ನಲ್ಲಿ ನಡೆದ ಭೀಕರ ಘಟನೆಯಲ್ಲಿ, ಹಾಸ್ಟೆಲ್ನ ಹಿರಿಯ ವಾರ್ಡನ್ ಮತ್ತು ಅವರ ಸಾಕುಪ್ರಾಣಿ ಎಬಿವಿಪಿ ಗೂಂಡಾಗಳು ಎನ್ಎಸ್ಯುಐ ಕಾರ್ಯಕರ್ತ ಹಾಗೂ ಜೆಎನ್ಯು ಸಂಶೋಧನಾ ವಿದ್ಯಾರ್ಥಿಯಾಗಿರುವ ನಮ್ಮ ಕಾರ್ಯಕರ್ತ ಫಾರೂಕ್ ಆಲಂ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಎನ್ಎಸ್ಯುಐ ಹೇಳಿಕೊಂಡಿದೆ.