ಪವನ್ ಕಲ್ಯಾಣ್ಗೆ ಝೀರೋ ಟ್ರಾಫಿಕ್ ಕಲ್ಪಿಸಿದ್ದರಿಂದ ಜೆಇಇ ಪ್ರವೇಶ ಪರೀಕ್ಷೆ ತಪ್ಪಿದೆ : ವಿದ್ಯಾರ್ಥಿಗಳಿಂದ ಆರೋಪ

Photo | indiatoday
ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಡಿಸಿಎಂ ಪವನ್ ಕಲ್ಯಾಣ್ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರಿಂದ ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಹಲವು ವಿದ್ಯಾರ್ಥಿಗಳು ಜೆಇಇ ಪ್ರವೇಶ ಪರೀಕ್ಷೆಗೆ ಕ್ಲಪ್ತ ಸಮಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ತಡವಾಗಿ ಬಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಿಂದ ವಾಪಾಸ್ಸು ಕಳುಹಿಸಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಎಪ್ರಿಲ್ 2ರಂದು ವಿಶಾಖಪಟ್ಟಣಕ್ಕೆ ಪವನ್ ಕಲ್ಯಾಣ್ ಆಗಮಿಸಿದ್ದರು. ಈ ವೇಳೆ ಗೋಪಾಲಪಟ್ಟಣಂ–ಪೆಂಡುರ್ತಿ ಮಾರ್ಗದ ಸರ್ವಿಸ್ ರಸ್ತೆ ಬಳಿ ಸಾರ್ವಜನಿಕ ಸಂಚಾರಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ಇದರಿಂದ ಬೆಳಿಗ್ಗೆ ಜೆಇಇ ಪ್ರವೇಶ ಪರೀಕ್ಷೆಗೆ ತೆರಳಬೇಕಿದ್ದ 30ಕ್ಕೂ ಅಧಿಕ ವಿದ್ಯಾರ್ಥಿಗಳು ಟ್ರಾಫಿಕ್ನಲ್ಲೇ ಸಿಲುಕಿಕೊಂಡು ಪರೀಕ್ಷೆಗೆ ಕ್ಲಪ್ತ ಸಮಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನೀಡದೆ ಎಲ್ಲಾ 30 ವಿದ್ಯಾರ್ಥಿಗಳನ್ನು ಪರೀಕ್ಷಾ ಹಾಲ್ನ ಗೇಟ್ನಿಂದಲೇ ವಾಪಾಸ್ಸು ಕಳುಹಿಸಲಾಗಿದೆ ಎಂದು ಪೋಷಕರು ಆರೋಪಿಸಿದರು.
ʼಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನಕ್ಕೆ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಿದ್ದರಿಂದ ನನ್ನ ಮಗನಿಗೆ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗಿಲ್ಲʼ ಎಂದು ಬಿ ಕಲಾವತಿ ಎಂಬವರು ಮಾಧ್ಯಮಗಳಿಗೆ ತಿಳಿಸಿದರು. ಇದೇ ರೀತಿ ಇತರ ವಿದ್ಯಾರ್ಥಿಗಳ ಪೋಷಕರು ಕೂಡ ಆರೋಪವನ್ನು ಮಾಡಿದ್ದಾರೆ.
ಆದರೆ, ಈ ಆರೋಪವನ್ನು ನಗರ ಪೊಲೀಸರು ನಿರಾಕರಿಸಿದರು. ಬೆಳಿಗ್ಗೆ 8.30ರ ನಂತರ ನಾವು ಪವನ್ ಕಲ್ಯಾಣ್ ಅವರಿಗೆ ಝೀರೋ ಟ್ರಾಫಿಕ್ ನೀಡಿದ್ದೇವೆ. ಹೀಗಾಗಿ ಪರೀಕ್ಷೆಗೆ ಹೋಗುವವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರ ಆರೋಪದ ಹಿನ್ನೆಲೆ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.