2010ರಿಂದ ಯುಎಪಿಎ ಕಾಯ್ದೆಯಡಿ ಬಂಧಿತರಾದ ಪತ್ರಕರ್ತರ ಪೈಕಿ ಶೇ. 40ಕ್ಕೂ ಹೆಚ್ಚು ಮಂದಿಯ ವಿರುದ್ಧ 2020ರಲ್ಲಿ ದೋಷಾರೋಪ
ಅಧ್ಯಯನ ವರದಿಯಲ್ಲಿ ಬಹಿರಂಗ
ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ, 1967ರ ಅಡಿ ಪ್ರಕರಣಗಳನ್ನು ಎದುರಿಸುತ್ತಿರುವ ಪತ್ರಕರ್ತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ದೇಶದಲ್ಲಿನ ಪತ್ರಿಕಾ ಸ್ವಾತಂತ್ಯದ ಸ್ಥಿತಿಯ ಬಗ್ಗೆ ಕಳವಳವನ್ನುಂಟು ಮಾಡಿದೆ. ಆರಂಭದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕಲು ಜಾರಿಗೊಳಿಸಲಾಗಿದ್ದ ದಮನಕಾರಿ ಯುಎಪಿಎ ಕಾಯ್ದೆಯ ಅಡಿ 2010ರಿಂದ ಇಲ್ಲಿಯವರೆಗೆ 16 ಪತ್ರಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ವಿವಿಧ ವಿಷಯಗಳ ಕುರಿತು ತನಿಖಾ ವರದಿಗಳನ್ನು ಮಾಡುತ್ತಿರುವ ಪತ್ರಕರ್ತರ ವಿರುದ್ಧ ಈ ಕಾಯ್ದೆಯನ್ನು ಬಳಸುತ್ತಿರುವುದರಿಂದ ನೈತಿಕ ಪತ್ರಿಕೋದ್ಯಮದ ಅಪರಾಧೀಕರಣವಾಗುತ್ತಿದ್ದು, ಪತ್ರಕರ್ತರ ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಈ ಕಾಯ್ದೆಯಡಿ ಬಂಧಿತರಾಗುವ ಆರೋಪಿಗಳಿಗೆ ಸೆರೆವಾಸ ವಿಧಿಸುವುದು ರೂಢಿಯಾಗಿದ್ದು, ವಿರಳ ಪ್ರಕರಣಗಳಲ್ಲಿ ಮಾತ್ರ ಜಾಮೀನು ದೊರೆಯುತ್ತಿರುವುದರಿಂದ ಇಂತಹ ಆರೋಪಕ್ಕೆ ಗುರಿಯಾಗುವವರು ಸುದೀರ್ಘ ಕಾನೂನು ಹೋರಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಪ್ರಕರಣದಡಿ ಆರೋಪಿಗಳಾಗಿರುವ 16 ಪತ್ರಕರ್ತರ ಪೈಕಿ ಕೇವಲ ಇಬ್ಬರು ಮಾತ್ರ ಆರೋಪ ಮುಕ್ತರಾಗಲು ಸಾಧ್ಯವಾಗಿದ್ದು, ಓರ್ವ ಪತ್ರಕರ್ತ ಖುಲಾಸೆಗೊಂಡಿದ್ದರೆ, ಮತ್ತೊಬ್ಬ ಪತ್ರಕರ್ತ ಬಿಡುಗಡೆಯಾಗಿದ್ದಾರೆ. ಕಳೆದ ಕೆಲವು ದಶಕಗಳಿಂದ ದೇಶ ಭಕ್ತಿ, ರಾಷ್ಟ್ರೀಯ ಭದ್ರತೆ ಹಾಗೂ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪಗಳು ಯುಎಪಿಎ ಬತ್ತಳಿಕೆಗೆ ಸೇರ್ಪಡೆಯಾಗಿದ್ದು, ಇತ್ತೀಚಿನ Newsclick ಸುದ್ದಿ ತಾಣದ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಬಂಧನವು ಈ ಮಾತಿಗೆ ನಿದರ್ಶನವಾಗಿದೆ.
Newsclick ಸಂಪಾದಕ ಪುರ್ಕಾಯಸ್ಥ ಹಾಗೂ ಅವರ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 153ಎ (ಎರಡು ಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವುದು) ಹಾಗೂ 120ಬಿ (ಕ್ರಿಮಿನಲ್ ಪಿತೂರಿ) ಒಳಗೊಂಡಂತೆ ಯುಎಪಿಎ ಕಾಯ್ದೆಯ ವಿವಿಧ ಸೆಕ್ಷನ್ ಗಳಾದ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳು), 16 (ಭಯೋತ್ಪಾದಕ ಕೃತ್ಯ), 17 (ಭಯೋತ್ಪಾದಕ ಕೃತ್ಯಗಳಿಗಾಗಿ ನಿಧಿ ಸಂಗ್ರಹ), 18 (ಪಿತೂರಿ) ಹಾಗೂ 22ಸಿ (ಕಂಪನಿಗಳು ಹಾಗೂ ದತ್ತಿ ನಿಧಿಗಳಿಂದ ಅಪರಾಧ ಕೃತ್ಯಗಳು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಗಳನ್ನು ಪತ್ರಕರ್ತರ ವಿರುದ್ಧ ಪದೇ ಪದೇ ಬಳಸುತ್ತಿರುವುದರಿಂದ ದೇಶದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕರಿನೆರಳು ಚಾಚಿದೆ.
ಈ ಕುರಿತು “ಬಿಹೈಂಡ್ ಬಾರ್ಸ್’ ಎಂಬ ಶೀರ್ಷಿಕೆ ಹೊಂದಿರುವ ಅಧ್ಯಯನ ವರದಿಯನ್ನು The Free Speech Collective ಸಂಸ್ಥೆ ಸಿದ್ಧಪಡಿಸಿದ್ದು, ಕಳೆದ ಒಂದು ದಶಕದಲ್ಲಿ ಬಂಧಿತರಾಗಿರುವ ಪತ್ರಕರ್ತರ ಕುರಿತು ವಿಶ್ಲೇಷಿಸಿದೆ. ಈ ಅಧ್ಯಯನ ವರದಿಯಲ್ಲಿ ಪತ್ರಕರ್ತರು ತಮ್ಮ ವೃತ್ತಿಪರತೆಗಾಗಿ ಬಂಧನ, ವಶ, ವಿಚಾರಣೆಗಳು ಅಥವಾ ಶೋಕಾಸ್ ನೋಟಿಸ್ ನಂಥ ಕ್ರಮಗಳನ್ನು ಎದುರಿಸಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಇದರೊಂದಿಗೆ ಒಂಬತ್ತು ಮಂದಿ ವಿದೇಶಿ ಪತ್ರಕರ್ತರ ವಿರುದ್ಧ ಗಡೀಪಾರು, ಬಂಧನ, ವಿಚಾರಣೆಗಳು ಅಥವಾ ಭಾರತಕ್ಕೆ ಪ್ರವೇಶಿಸಲು ಅನುಮತಿ ನಿರಾಕರಣೆಯಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವಿದ್ಯಮಾನವು ಭಾರತದಲ್ಲಿ ಪತ್ರಿಕೋದ್ಯಮ ಎಂತಹ ಸವಾಲು ಎದುರಿಸುತ್ತಿದೆ ಎಂಬುದರತ್ತ ಬೆಳಕು ಚೆಲ್ಲಿದೆ.
ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪತ್ರಕರ್ತರು ಸುದ್ದಿ ಮತ್ತು ಮಾಹಿತಿಯ ಸಂದೇಶ ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಅವರನ್ನು ಮೌನಗೊಳಿಸುವುದರಿಂದ ಪ್ರಮುಖ ವಿಷಯಗಳ ಕುರಿತು ವರದಿ ಮಾಡುವ ಅವರ ಸಾಮರ್ಥ್ಯವನ್ನು ಹತ್ತಿಕ್ಕಿದಂತೆ ಮಾತ್ರವಾಗದೆ, ಮಾಹಿತಿಯನ್ನು ಯಾವುದೇ ಭೀತಿಯಿಲ್ಲದೆ ಪಡೆಯುವ ಪ್ರಜೆಗಳ ಪ್ರಜಾಸತ್ತಾತ್ಮಕ ಹಕ್ಕು ಮೊಟಕುಗೊಂಡಂತಾಗುತ್ತದೆ.
ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಪತ್ರಕರ್ತರ ಪಟ್ಟಿ (2010ರಿಂದ ಇಲ್ಲಿಯವರೆಗೆ)
• ಹಾಲಿ ಯುಎಪಿಎ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಪತ್ರಕರ್ತರು: 16
• ಯುಎಪಿಎ ಕಾಯ್ದೆಯಡಿ ಸೆರೆವಾಸದಲ್ಲಿರುವ ಪತ್ರಕರ್ತರು: 7
• ಯುಎಪಿಎ ಆರೋಪದಡಿ ಜಾಮೀನು ಪಡೆದಿರುವ ಪತ್ರಕರ್ತರು: 8
• ಪ್ರಕರಣ ದಾಖಲಾಗಿರುವ, ಆದರೆ ಬಂಧಿತರಾಗದ ಪತ್ರಕರ್ತರು: 1
• ಖುಲಾಸೆಗೊಂಡ ಪತ್ರಕರ್ತರು: 1
• ಬಿಡುಗಡೆಗೊಂಡ ಪತ್ರಕರ್ತರು: 1
ಬಂಧನಕ್ಕೊಳಗಾಗಿರುವವರು, ಪೊಲೀಸರ ವಶದಲ್ಲಿರುವವರು
1. ಪ್ರಬೀರ್ ಪುರ್ಕಾಯಸ್ಥ, ಸಂಪಾದಕರು, ನ್ಯೂಸ್ ಕ್ಲಿಕ್ – ದಿನಾಂಕ 3.10.2023ರಂದು ಹೊಸ ದಿಲ್ಲಿಯಲ್ಲಿ ಬಂಧನ
ಸೆರೆವಾಸದಲ್ಲಿರುವವರು:
2. ಆಸಿಫ್ ಸುಲ್ತಾನ್, ವರದಿಗಾರ, ಕಾಶ್ಮೀರ್ ನೆರೇಟರ್ – ದಿನಾಂಕ 27.08.2018ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಬಂಧನ
3 ಫಹಾದ್ ಶಾ, ಸಂಪಾದಕರು,ದಿ ಕಾಶ್ಮೀರ್ ವಾಲಾ – ದಿನಾಂಕ 4.2.2022ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಿಂದ ಬಂಧನ
4 ಸಜ್ಜದ್ ಗುಲ್, ತರಬೇತಿನಿರತ ಪತ್ರಕರ್ತ, ದಿ ಕಾಶ್ಮೀರ್ ವಾಲಾ – ದಿನಾಂಕ 5.1.2022ರಂದು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಿಂದ ಬಂಧನ
5. ರೂಪೇಶ್ ಕುಮಾರ್, ಸ್ವತಂತ್ರ ಪತ್ರಕರ್ತರು – ದಿನಾಂಕ 17.07.2022ರಂದು ಝಾರ್ಖಂಡ್ ನ ರಾಮಗಢ ಜಿಲ್ಲೆಯಿಂದ ಬಂಧನ
6 ಇರ್ಫಾನ್ ಮೇಹ್ರಾಜ್, ಸಂಪಾದಕರು, ವಂದೇ ನಿಯತಕಾಲಿಕ – ದಿನಾಂಕ 21.3.2023ರಂದು ಜಮ್ಮು ಮತ್ತು ಕಾಶ್ಮೀರದಿಂದ ಬಂಧನ
ಗೃಹ ಬಂಧನದಲ್ಲಿರುವವರು
1 ಗೌತಮ್ ನವಲ್ಖಾ, ಲೇಖಕರು ಹಾಗೂ ನ್ಯೂಸ್ ಕ್ಲಿಕ್ ನ ಸಮಾಲೋಚಕ ಸಂಪಾದಕರು – ದಿನಾಂಕ 30.08.2018ರಿಂದ ಗೃಹ ಬಂಧನ; ದಿನಾಂಕ 20.4.2020ರಂದು ಶರಣಾಗತಿ ಮತ್ತು ಸೆರೆವಾಸ; 19.11.2022ರಿಂದ ಮರಳಿ ಗೃಹ ಬಂಧನ
ಜಾಮೀನಿನ ಮೇಲೆ ಬಿಡುಗಡೆಯಾಗಿರುವವರು (ಬಂಧನ ದಿನಾಂಕದ ಆಧಾರದಲ್ಲಿ)
1. ಸೀಮಾ ಆಝಾದ್, ಸಂಪಾದಕ, ದಸ್ತಕ್, ಪ್ರಯಾಗ್ ರಾಜ್, ಉತ್ತರ ಪ್ರದೇಶ – ಫೆಬ್ರವರಿ 2010ರಂದು ಬಂಧನ; ಆಗಸ್ಟ್ 2012ರಲ್ಲಿ ಜಾಮೀನು ಮಂಜೂರು; ದಿನಾಂಕ 6.9.2023ರಂದು ದಾಳಿ
2. ವಿಶ್ವ ವಿಜಯ್, ಸಂಪಾದಕ, ದಸ್ತಕ್, ಪ್ರಯಾಗ್ ರಾಜ್, ಉತ್ತರ ಪ್ರದೇಶ – ಫೆಬ್ರವರಿ 2010ರಲ್ಲಿ ಬಂಧನ; ಆಗಸ್ಟ್ 2012ರಲ್ಲಿ ಜಾಮೀನು ಮಂಜೂರು; ದಿನಾಂಕ 6.9.2023ರಂದು ದಾಳಿ
3. ಕೆ.ಕೆ.ಶಾಹೀನಾ, ಪತ್ರಕರ್ತೆ, ಔಟ್ ಲುಕ್ – ಡಿಸೆಂಬರ್ 2010ರಲ್ಲಿ ಪ್ರಕರಣ ದಾಖಲು; ಜುಲೈ 2011ರಲ್ಲಿ ನಿರೀಕ್ಷಣಾ ಜಾಮೀನು ಮಂಜೂರು
4. ಸಿದ್ದಿಕ್ ಕಪ್ಪನ್, ಪತ್ರಕರ್ತ, ಅಳಿಮುಖಮ್, ದಿಲ್ಲಿ – ದಿನಾಂಕ 5.10.2020ರಲ್ಲಿ ಬಂಧನ; ಯುಎಪಿಎ ಪ್ರಕರಣದಲ್ಲಿ ದಿನಾಂಕ 9.9.2023ರಂದು ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ದಿನಾಂಕ 23.12.2022ರಂದು ಜಾಮೀನು ಮಂಜೂರು
5. ಪವೋಜೆಲ್ ಚವೋಬಾ, ಕಾರ್ಯಕಾರಿ ಸಂಪಾದಕ, ದಿ ಫ್ರಂಟಿಯರ್ ಮಣಿಪುರ್, ಇಂಫಾಲ – ದಿನಾಂಕ 17.1.2021ರಂದು ಬಂಧನ; ದಿನಾಂಕ 18.1.2021ರಂದು ಜಾಮೀನು ಮಂಜೂರು
6. ಧೀರೇನ್ ಸಡೋಕ್ಪಮ್, ಸಂಪಾದಕ, ದಿ ಫ್ರಂಟಿಯರ್ ಮಣಿಪುರ್, ಇಂಫಾಲ – ದಿನಾಂಕ 17.1.2021ರಂದು ಬಂಧನ; ದಿನಾಂಕ 18.1.2021ರಂದು ಜಾಮೀನು ಮಂಜೂರು
7. ಶ್ಯಾಮ್ ಮೀರಾ ಸಿಂಗ್, ಸ್ವತಂತ್ರ ಪತ್ರಕರ್ತ, ಹೊಸದಿಲ್ಲಿ – ದಿನಾಂಕ 10.11.2021ರಂದು ಪ್ರಕರಣ ದಾಖಲು; ದಿನಾಂಕ 18.11.2021ರಂದು ನಿರೀಕ್ಷಣಾ ಜಾಮೀನು ಮಂಜೂರು
8. ಮನನ್ ದಾರ್, ಫೋಟೊ ಪತ್ರಕರ್ತ, ಶ್ರೀನಗರ, ಜಮ್ಮು ಮತ್ತು ಕಾಶ್ಮೀರ – ದಿನಾಂಕ 22.10.2021ರಂದು ಬಂಧನ; ದಿನಾಂಕ 4.1.2023ರಂದು ಜಾಮೀನು ಮಂಜೂರು
ಪ್ರಕರಣ ದಾಖಲಾದರೂ ಬಂಧನಕ್ಕೊಳಗಾಗದವರು
1. ಮಸ್ರತ್ ಝಹ್ರಾ, ಫೋಟೊ ಪತ್ರಕರ್ತ, ಶ್ರೀನಗರ – ದಿನಾಂಕ 18.4.2020ರಂದು ಪ್ರಕರಣ ದಾಖಲು
ಖುಲಾಸೆಗೊಂಡವರು
1. ಸಂತೋಷ್ ಯಾದವ್, ಬಸ್ತಾರ್, ಛತ್ತೀಸ್ ಗಢ – ಸೆಪ್ಟೆಂಬರ್ 2015ರಲ್ಲಿ ಬಂಧನ; ದಿನಾಂಕ 2.1.2020ರಂದು ಖುಲಾಸೆ
ಬಿಡುಗಡೆಗೊಂಡವರು
1. ಕಮ್ರನ್ ಯೂಸುಫ್, ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರ – ಸೆಪ್ಟೆಂಬರ್ ನಲ್ಲಿ ಬಂಧನ, ದಿನಾಂಕ 16.3.2022ರಲ್ಲಿ ಬಿಡುಗಡೆ