ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ; ಸಬ್ ಇನ್‍ಸ್ಪೆಕ್ಟರ್ ಬಂಧನ
ಆಗ್ರಾ: ಮನೆಗೆ ನುಗ್ಗಿ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ಈ ವಿಷಯವನ್ನು ಬಹಿರಂಗಪಡಿಸಿದರೆ ತಂದೆಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುವುದಾಗಿ ಬೆದರಿಕೆ ಹಾಕಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸಬ್ ಇನ್‍ಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಿ, ಬಂಧಿಸಲಾಗಿದೆ.
ಯುವತಿಯ ಆಕ್ರಂದನ ಕೇಳಿ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು, ತಪ್ಪಿಸಿಕೊಳ್ಳಲು ಯತ್ನಿಸಿದ ಪಿಎಸ್‍ಐ ಸಂದೀಪ್ ಕುಮಾರ್ (34) ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಅಧಿಕಾರಿ ಒಳ ಉಡುಪಿನಲ್ಲಿರುವ ಹಾಗೂ ಹಗ್ಗದಿಂದ ಕಟ್ಟಿ ಆತನನ್ನು ಗ್ರಾಮಸ್ಥರು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿ ಅಧಿಕಾರಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಎನ್.ಎನ್. ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ವಿಡಿಯೊಗಳನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತ ಪ್ರೀತೀಂದರ್ ಸಿಂಗ್, ಆರೋಪಿ ಪಿಎಸ್‍ಐಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಸೋಮವಾರ ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಮತ್ತು 452ರ ಅನ್ವಯ ಎಫ್‍ಐಆರ್ ದಾಖಲಿಸಲಾಗಿದೆ. "ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಪಿಎಸ್‍ಐ ಹಾಗೂ ಒಬ್ಬ ಪೊಲೀಸ್ ಯುವತಿಯ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ನಾವು ವಿಚಾರಣೆಗೆ ಬಂದಿದ್ದಾಗಿ ಹೇಳಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಈ ಹಿಂದೆ ಕಿರುಕುಳ ನೀಡಿದ ನಿದರ್ಶನಗಳ ಆಧಾರದಲ್ಲಿ ಬಾಗಿಲು ತೆರೆಯಲು ಯುವತಿ ನಿರಾಕರಿಸಿದಳು. ಆಗ ಸಂದೀಪ್ ಛಾವಣಿಯ ಮೂಲಕ ಜಿಗಿದು ಮನೆಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ಎಸಗಿದ" ಎಂದು ಆರೋಪಿಸಲಾಗಿದೆ. ಏತನ್ಮಧ್ಯೆ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಿದ ಗ್ರಾಂಸ್ಥರು, ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಪಟ್ಟು ಹಿಡಿದರು.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಗಿದೆ. ಸಂದೀಪ್ ವಿರುದ್ಧ ಇಲಾಖಾ ತನಿಖೆಗೂ ಆದೇಶ ನೀಡಲಾಗಿದೆ" ಎಂದು ಡಿಸಿಪಿ ಸೋನಮ್ ಕುಮಾರ್ ಹೇಳಿದ್ದಾರೆ.
ಗಸ್ತು ತಿರುಗುವ ನೆಪದಲ್ಲಿ ಗ್ರಾಮಕ್ಕೆ ಭೇಟಿ ನೀಡುಯತ್ತಿರುವ ಸಂದೀಪ್, ಎರಡು ತಿಂಗಳಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದಕ್ಕೆ ಆಕ್ಷೇಪಿಸಿದಾಗ, ಆಕೆಯ ಮಾವನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ನಾವು ಆತನನ್ನು ಹಿಡಿದಾಗ ಆತ ಪಾನಮತ್ತನಾಗಿದ್ದ ಎಂದೂ ಪಕ್ಕದ ಮನೆಯವರು ಆಪಾದಿಸಿದ್ದಾರೆ.