ದಿಲ್ಲಿ-ಲಕ್ನೊ ಹೆದ್ದಾರಿಯಲ್ಲಿ ಸೂಟ್ ಕೇಸ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ
Photo credit: NDTV
ಹಾಪುರ್ (ಉತ್ತರ ಪ್ರದೇಶ): ಮಹಿಳೆಯ ಮೃತದೇಹ ಇದ್ದ ಕೆಂಪು ಬಣ್ಣದ ಸೂಟ್ ಕೇಸ್ ಒಂದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ದಿಲ್ಲಿ-ಲಕ್ನೊ ಹೆದ್ದಾರಿಯಲ್ಲಿ ಇಂದು ಪತ್ತೆಯಾಗಿದೆ. ಈ ಸೂಟ್ ಕೇಸ್ ಅನ್ನು ಹೆದ್ದಾರಿ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರ ಕಣ್ಣಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆ ಸೂಟ್ ಕೇಸ್ ಅನ್ನು ತೆರೆದಾಗ, ದೇಹದ ಮೇಲೆಲ್ಲ ಗಾಯಗಳಾಗಿದ್ದ ಮಹಿಳೆಯೊಬ್ಬರ ಮೃತದೇಹವೊಂದು ಕಂಡು ಬಂದಿದೆ. ಮೃತ ಮಹಿಳೆಗೆ 25ರಿಂದ 30 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಪ್ರಾಥಮಿಕ ಮಾಹಿತಿ ದೊರೆಯುತ್ತಿದ್ದಂತೆಯೇ, ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ತಮ್ಮ ತನಿಖೆಯನ್ನು ಪ್ರಾರಂಭಿಸಿರುವುದರಿಂದ, ಸೂಟ್ ಕೇಸ್ ಪತ್ತೆಯಾದ ಸುತ್ತಮುತ್ತಲಿನ ಸ್ಥಳವನ್ನು ಸುತ್ತುವರಿಯಲಾಗಿದೆ. ಸೂಟ್ ಕೇಸ್ ನಿಂದ ಮಹಿಳೆಯ ಮೃತದೇಹವನ್ನು ಹೊರತೆಗೆದ ನಂತರ, ಪೊಲೀಸ್ ಅಧಿಕಾರಿಗಳು ಆಳವಾದ ಪರೀಕ್ಷೆ ಕೈಗೊಂಡಿದ್ದು, ಆ ಸೂಟ್ ಕೇಸ್ ನಲ್ಲಿ ಕೆಲವು ಬಟ್ಟೆಗಳೂ ಇರುವುದು ಕಂಡು ಬಂದಿದೆ.
ಮಹಿಳೆಯ ದೇಹದ ಮೇಲೆ ಕಂಡು ಬಂದಿರುವ ಗಾಯಗಳ ಪ್ರಕಾರ, ಆಕೆಯ ಮೃತದೇಹ ಪತ್ತೆಯಾಗುವುದಕ್ಕೂ ಸುಮಾರು ಒಂದು ದಿನ ಮುಂಚೆ ಮೃತಪಟ್ಟಿರಬಹುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಭಟ್ನಾಗರ್ ಶಂಕಿಸಿದ್ದಾರೆ.
ಈ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೈಗೊಂಡಿದ್ದು, ಮಹಿಳೆಯ ಸಾವಿಗೆ ಕಾರಣವಾಗಿರುವ ಸನ್ನಿವೇಶಗಳನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.