ಎನ್ ಡಿಎಗೆ ಮತ್ತೆ ಬೆಂಬಲ: ವೈಎಸ್ ಆರ್ ಕಾಂಗ್ರೆಸ್ ನಿರ್ಧಾರ
ಹೊಸದಿಲ್ಲಿ: ಎನ್ ಡಿಎ ಯಿಂದ ಅಂತರ ಕಾಯ್ದುಕೊಂಡಿದ್ದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಮಣಿಪುರ ಹಿಂಸಾಚಾರದ ವಿರುದ್ಧ ಕೇಂದ್ರ ಸರಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧ ತನ್ನ ಮತ ಚಲಾಯಿಸಲಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.
ಬಿಜೆಪಿ ಮಂಡಿಸುವ ಮಸೂದೆಗಳಿಗೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭೆಯ ನಾಯಕ ವಿ.ವಿಜಯಸಾಯಿರೆಡ್ಡಿ ಹೇಳಿದ್ದಾರೆ.
ದಿಲ್ಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಮಸೂದೆ ಸೇರಿದಂತೆ ವಿವಿಧ ಮಸೂದೆಗಳಿಗೂ ವೈಎಸ್ ಆರ್ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಯಲ್ಲಿ ಒಂಬತ್ತು ಮತ್ತು ಲೋಕಸಭೆಯಲ್ಲಿ 22 ಸದಸ್ಯರನ್ನು ಹೊಂದಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ನಿರ್ಣಾಯಕ ಮಸೂದೆಗಳಲ್ಲಿ ಆಗಾಗ್ಗೆ ಸರಕಾರವನ್ನು ಬೆಂಬಲಿಸುತ್ತದೆ.