ನಿಮ್ಮ ವೆಚ್ಚದಲ್ಲೇ ಮನೆ ಪುನರ್ ನಿರ್ಮಾಣಕ್ಕೆ ಆದೇಶಿಸುತ್ತೇವೆ: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ
ಪ್ರಾಧ್ಯಾಪಕರು,ವಕೀಲರ ಮನೆಗಳು ಧ್ವಂಸ ಪ್ರಕರಣ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಪ್ರಯಾಗರಾಜ್ನಲ್ಲಿ ಓರ್ವ ವಕೀಲರು,ಓರ್ವ ಪ್ರಾಧ್ಯಾಪಕರು ಮತ್ತು ಇತರ ಮೂವರ ಮನೆಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಉತ್ತರ ಪ್ರದೇಶ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದೆ.
ಸರಕಾರದ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು,ಇಂತಹ ಕ್ರಮಗಳು ಆಘಾತಕಾರಿ ಮತ್ತು ತಪ್ಪು ಸಂದೇಶಗಳನ್ನು ರವಾನಿಸುತ್ತವೆ ಎಂದು ಕಿಡಿಕಾರಿತು.
ಸಂವಿಧಾನದ ವಿಧಿ 21 ಎನ್ನುವುದು ಒಂದು ಇದೆ ಎಂದು ನ್ಯಾ.ಓಕಾ ನೆನಪಿಸಿದರು.
ನೆಲಸಮಕ್ಕೆ ಮುನ್ನ ಅನುಸರಿಸಬೇಕಾದ ಕಾರ್ಯವಿಧಾನವನ್ನು ವಿಷದಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ಬೆಟ್ಟು ಮಾಡಿದ ನ್ಯಾ.ಓಕಾ,ಈಗ ಬುಲ್ಡೋಝರ್ ನ್ಯಾಯದ ಕುರಿತು ಸಮನ್ವಯ ಪೀಠದ ತೀರ್ಪು ಕೂಡ ಇದೆ ಎಂದು ಹೇಳಿದರು.
ಸರಕಾರಕ್ಕೆ ಚಾಟಿಯೇಟು ಬೀಸಿದ ನ್ಯಾ.ಓಕಾ, ‘ಈಗ ನಾವು ನಿಮ್ಮ ವೆಚ್ಚದಲ್ಲಿ ಪುನರ್ನಿರ್ಮಾಣಕ್ಕೆ ಆದೇಶಿಸುತ್ತೇವೆ, ಈಗ ಇರುವುದು ಅದೊಂದೇ ಮಾರ್ಗ’ ಎಂದು ಹೇಳಿದರು.
ತಮ್ಮ ಮನೆಗಳನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ತಾವು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ವಜಾಗೊಳಿಸಿದ ಬಳಿಕ ಅರ್ಜಿದಾರರಾದ ಅಡ್ವೊಕೇಟ್ ಝುಲ್ಫಿಕರ್ ಅಲಿ, ಪ್ರೊಫೆಸರ್ ಅಲಿ ಅಹ್ಮದ್, ಇಬ್ಬರು ವಿಧವೆಯರು ಮತ್ತು ಇನ್ನೋರ್ವ ವ್ಯಕ್ತಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲನ್ನೇರಿದ್ದಾರೆ.
ಅಧಿಕಾರಿಗಳು ಶನಿವಾರ ತಡರಾತ್ರಿ ತಮಗೆ ನೆಲಸಮ ನೋಟಿಸ್ಗಳನ್ನು ನೀಡಿದ್ದರು ಮತ್ತು ಮರುದಿನವೇ ತಮ್ಮ ಮನೆಗಳನ್ನು ಧ್ವಂಸಗೊಳಿಸಿದ್ದರು. ತಮಗೆ ಈ ಕ್ರಮವನ್ನು ಪ್ರಶ್ನಿಸಲೂ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು, ತಾವು ಅತಿಕ್ರಮಣಕಾರರಲ್ಲ, ಭೂಮಿಯನ್ನು ಕಾನೂನುಬದ್ಧವಾಗಿ ಭೋಗ್ಯಕ್ಕೆ ಪಡೆದಿದ್ದೇವೆ ಮತ್ತು ತಮ್ಮ ಭೋಗ್ಯದ ಹಕ್ಕುಗಳನ್ನು ಫ್ರೀಹೋಲ್ಡ್ ಆಸ್ತಿಯನ್ನಾಗಿ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದೇವೆ ಎಂದು ವಾದಿಸಿದ್ದಾರೆ.
ಸರಕಾರವು ತನ್ನ ಕಕ್ಷಿದಾರರ ಭೂಮಿಯನ್ನು 2023ರಲ್ಲಿ ಕೊಲೆಯಾದ ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ಗೆ ಸೇರಿದ್ದೆಂದು ತಪ್ಪಾಗಿ ಭಾವಿಸಿ ಅವರ ಮನೆಗಳನ್ನು ಧ್ವಂಸಗೊಳಿಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ನೋಟಿಸ್ಗಳಿಗೆ ಉತ್ತರಿಸಲು ಅರ್ಜಿದಾರರಿಗೆ ಸಾಕಷ್ಟು ಸಮಯಾವಕಾಶವಿತ್ತು ಎಂದು ಹೇಳಿದರಾದರೂ, ನ್ಯಾ.ಓಕಾ ಅವರು ನೋಟಿಸ್ ಜಾರಿಗೊಳಿಸಿದ ವಿಧಾನವನ್ನು ಪ್ರಶ್ನಿಸಿದರು.
ಈ ವಿಷಯವನ್ನು ಉಚ್ಚ ನ್ಯಾಯಾಲಯಕ್ಕೆ ಮರಳಿಸುವಂತೆ ವೆಂಕಟರಮಣಿ ನೀಡಿದ ಸಲಹೆಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು, ಹಾಗೆ ಮಾಡುವುದರಿಂದ ಅದು ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆಯಷ್ಟೇ ಎಂದು ಹೇಳಿತು.
2021 ಮಾ.1ರಂದು ನೆಲಸಮ ನೋಟಿಸನ್ನು ಹೊರಡಿಸಲಾಗಿದ್ದು, 2021 ಮಾ.6ರಂದು ಜಾರಿಗೊಳಿಸಲಾಗಿತ್ತು ಮತ್ತು ಉತ್ತರ ಪ್ರದೇಶ ನಗರ ಯೊಜನೆ ಮತ್ತು ಅಭಿವೃದ್ಧಿ ಕಾಯ್ದೆಯ ಕಲಂ 27(2)ರಡಿ ಮೇಲ್ಮನವಿ ಪ್ರಾಧಿಕಾರದ ಮುಂದೆ ಅದನ್ನು ಪ್ರಶ್ನಿಸಲು ಅವರಿಗೆ ಅವಕಾಶವನ್ನು ನೀಡದೇ 2021, ಮಾ.7ರಂದು ಮನೆಗಳನ್ನು ನೆಲಸಮಗೊಳಿಸಲಾಗಿತ್ತು.
ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2025, ಮಾ.21ರಂದು ನಡೆಸಲಿದೆ.
ಸೌಜನ್ಯ: livelaw.in