ಒರಿಸ್ಸಾ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ಎಸ್. ಮುರಳೀಧರ್ ಅವರಿಗೆ ಹಿರಿಯ ವಕೀಲ ಸ್ಥಾನಮಾನ ಮಂಜೂರು ಮಾಡಿದ ಸುಪ್ರೀಂ ಕೋರ್ಟ್
Photo : PTI
ಹೊಸದಿಲ್ಲಿ: ಒರಿಸ್ಸಾ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ಎಸ್. ಮುರಳೀಧರ್ ಅವರಿಗೆ ಹಿರಿಯ ವಕೀಲ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಕ್ಟೋಬರ್ 16ರಂದು ನಡೆದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪೂರ್ಣಪ್ರಮಾಣದ ನ್ಯಾಯಾಲಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಸಂವಿಧಾನದ ವಿಧಿ 220ರ ಅನ್ವಯ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಅಥವಾ ತಾವು ಯಾವ ಹೈಕೋರ್ಟ್ ನಲ್ಲಿ ಸೇವೆ ಸಲ್ಲಿಸಿಲ್ಲವೊ ಅಂತಹ ಹೈಕೋರ್ಟ್ ನಲ್ಲಿ ವಕೀಲ ವೃತ್ತಿ ಮಾಡಬಹುದಾಗಿದೆ.
ಆಗಸ್ಟ್ 7ರಂದು ನ್ಯಾ. ಮುರಳೀಧರ್ ಒರಿಸ್ಸಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅವರು ದಿಲ್ಲಿ ಹಾಗೂ ಪಂಜಾಬ್ ಮತ್ತು ಹೈಕೋರ್ಟ್ ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು.
ಆಗಸ್ಟ್ 8, 1961ರಲ್ಲಿ ಜನಿಸಿದ ನ್ಯಾ. ಮುರಳೀಧರ್, ಸೆಪ್ಟೆಂಬರ್ 12, 1984ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು. ನಂತರ ಚೆನ್ನೈ ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ನಡೆಸಿದ್ದ ಅವರು, ದಿಲ್ಲಿಗೆ ಸ್ಥಳಾಂತರಗೊಂಡಿದ್ದರು.
ಆರಂಭದಲ್ಲಿ ಅವರನ್ನು ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಮೇ 2006ರಲ್ಲಿ ನೇಮಕ ಮಾಡಲಾಗಿತ್ತು. ಇದಾದ ನಂತರ ಮಾರ್ಚ್ 6, 2020ರಲ್ಲಿ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ವರ್ಗಾಯಿಸಲಾಗಿತ್ತು.
ಜನವರಿ 4, 2021ರಲ್ಲಿ ಒರಿಸ್ಸಾ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಮುರಳೀಧರ್ ಪ್ರಮಾಣ ವಚನ ಸ್ವೀಕರಿಸಿದ್ದರು.