ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿಸಿದ ಪ್ರಕರಣ: ಸುಪ್ರೀಂ ಕೋರ್ಟ್ ಕಳವಳ
►ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಆದೇಶ ►ಸಂತ್ರಸ್ತ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ
Photo: twitter.com/MuslimSpaces
ಹೊಸದಿಲ್ಲಿ: ಉತ್ತರ ಪ್ರದೇಶದ ಮುಜಾಫರ್ನಗರದ ಶಿಕ್ಷಕಿ ಮುಸ್ಲಿಂ ವಿದ್ಯಾರ್ಥಿಗೆ ಇತರೆ ವಿದ್ಯಾರ್ಥಿಗಳಿಂದ ಹಲ್ಲೆ ನಡೆಸಿರುವ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಆರೋಪಗಳು ನಿಜವಾಗಿದ್ದರೆ, ಅದು ರಾಜ್ಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಏಳು ವರ್ಷದ ಬಾಲಕನಿಗೆ ಸಹಪಾಠಿಗಳು ಶಿಕ್ಷಕಿಯ ಸೂಚನೆಯ ಮೇರೆಗೆ ಪದೇ ಪದೇ ಕಪಾಳಮೋಕ್ಷ ಮಾಡಿದ ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸುವಂತೆ ಆದೇಶಿಸಿದೆ.
ಇದನ್ನು "ಗಂಭೀರ ಮತ್ತು ಚಿಂತಾಜನಕ" ಎಂದು ಕರೆದ ನ್ಯಾಯಾಲಯ, ಇದು ಬದುಕುವ ಹಕ್ಕಿನ ವಿಷಯ ಎಂದು ಹೇಳಿದೆ.
ಘಟನೆಯ ವಿಡಿಯೋ ಈ ವರ್ಷದ ಆರಂಭದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ವಿದ್ಯಾರ್ಥಿ ಅಳುತ್ತಾ ನಿಂತಿದ್ದಾಗ ಆತನ ಸಹಪಾಠಿಗಳು ಸರದಿಯಂತೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಲವಾಗಿ ಹೊಡೆಯುವಂತೆ ಶಿಕ್ಷಕಿ ಇತರೆ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವು ಕೂಡ ವಿಡಿಯೋದಲ್ಲಿ ಕೇಳಿಬಂದಿದೆ.
ಅಲ್ಲದೆ, ಸಂತ್ರಸ್ತ ಬಾಲಕ ಮತ್ತು ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಇತರ ವಿದ್ಯಾರ್ಥಿಗಳಿಗೆ ವೃತ್ತಿಪರ ಸಲಹೆಗಾರರಿಂದ ಕೌನ್ಸೆಲಿಂಗ್ ನಡೆಸುವಂತೆ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಕ್ಟೋಬರ್ 30 ಕ್ಕೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದ್ದು, ವಿದ್ಯಾರ್ಥಿಗಳ ಕೌನ್ಸೆಲಿಂಗ್ ಕುರಿತು ಅನುಸರಣೆ ವರದಿಯನ್ನು ಸಲ್ಲಿಸಲು ಮತ್ತು ಸಂತ್ರಸ್ತ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿದೆ.
ಮಗುವಿನ ತಂದೆ ಮಾಡಿರುವ ಆರೋಪಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸದೆ ಇರುವ ಬಗ್ಗೆಯೂ ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪಣೆಯನ್ನೂ ವ್ಯಕ್ತಪಡಿಸಿದೆ.
ಧರ್ಮದ ಕಾರಣಕ್ಕಾಗಿ ಮಗನನ್ನು ಥಳಿಸಲಾಗಿದೆ ಎಂದು ತಂದೆ ಹೇಳಿಕೆ ನೀಡಿದ್ದರು, ಆದರೆ ಅದನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದು ಶಿಕ್ಷಣ ಗುಣಮಟ್ಟದ ವಿಷಯವಾಗಿದ್ದು, ಇದರಲ್ಲಿ ಸಂವೇದನಾತ್ಮಕ ಶಿಕ್ಷಣವೂ ಸೇರಿದೆ, ಶಿಕ್ಷಣ ಹಕ್ಕು ಕಾಯ್ದೆಯ ನಿಬಂಧನೆಗಳನ್ನು ಅನುಸರಿಸಲು ಉತ್ತರ ಪ್ರದೇಶ ಸರ್ಕಾರದ ವಿಫಲಗೊಂಡಿರುವ ಪ್ರಕರಣವೂ ಹೌದು ಎಂದು ನ್ಯಾಯಾಲಯ ಹೇಳಿದೆ.