ಆರೋಪಿಗೆ ಸೇರಿದ್ದು ಎಂದಾಕ್ಷಣ ಮನೆ ಕೆಡವಬಹುದೇ?: ʼಬುಲ್ಡೋಝರ್ ನ್ಯಾಯʼಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕ್ರಿಮಿನಲ್ ಮೊಕದ್ದಮೆಯ ಆರೋಪಿಗೆ ಸೇರಿದ್ದು ಎಂದಾಕ್ಷಣ ಮನೆ ಕೆಡವಬಹುದೇ ಎಂದು ʼಬುಲ್ಡೋಝರ್ ನ್ಯಾಯʼದ ಕುರಿತು ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.
ಆರೋಪಿತರಿಗೆ ಸೇರಿದ ಮನೆಯನ್ನು ಪ್ರಕರಣ ದಾಖಲಾದ ಕೂಡಲೇ ಕೆಡವುತ್ತಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ರೀತಿ ಪ್ರಶ್ನಿಸಿದೆ.
ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಆರೋಪಿಗೆ ಸೇರಿದ ಮನೆಯನ್ನು ಹೇಗೆ ಕೆಡವಲಾಗುತ್ತದೆ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಸೋಮವಾರ ʼಬುಲ್ಡೋಝರ್ ನ್ಯಾಯʼದ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೇಶದಾದ್ಯಂತ ‘ಬುಲ್ಡೋಝರ್ ನ್ಯಾಯ’ ನಡೆಯದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದರು.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರೋಪಿ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ನೆಲಸಮ ಮಾಡಲಾಗುವುದಿಲ್ಲ. ಕಟ್ಟಡವು ಕಾನೂನು ಬಾಹಿರವಾಗಿದ್ದರೆ ಮಾತ್ರ ನೆಲಸಮ ಮಾಡಲಾಗುತ್ತದೆ ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠಕ್ಕೆ ತಿಳಿಸಿದರು.
"ನೀವು ಇದನ್ನು ಒಪ್ಪಿಕೊಳ್ಳುತ್ತಿದ್ದರೆ, ನಾವು ಇದರ ಆಧಾರದ ಮೇಲೆ ಮಾರ್ಗಸೂಚಿಗಳನ್ನು ನೀಡುತ್ತೇವೆ. ಅವರು ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಹೇಗೆ ನೆಲಸಮ ಮಾಡುತ್ತೀರಿ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ಅಂತಹ ಪ್ರಕರಣಗಳನ್ನು ತಪ್ಪಿಸಲು ಏಕೆ ನಿರ್ದೇಶನಗಳನ್ನು ರವಾನಿಸಬಾರದು ಎಂದು ಮತ್ತೊಬ್ಬ ನ್ಯಾಯಮೂರ್ತಿ ವಿಶ್ವನಾಥನ್ ಕೇಳಿದರು. "ಮೊದಲು ನೋಟಿಸ್ ನೀಡಿ, ಉತ್ತರಿಸಲು ಕಾಲಾವಕಾಶ ಕೊಡಿ. ಆ ಮೇಲೆ ಕಾನೂನು ಪರಿಹಾರಗಳನ್ನು ಕಂಡುಕೊಂಡು ಕೆಡವಲು ಸಮಯ ನೀಡಿ" ಎಂದು ಹೇಳಿದರು.
ಅಕ್ರಮ ನಿರ್ಮಾಣವನ್ನು ನ್ಯಾಯಾಲಯವು ಸಮರ್ಥಿಸುವುದಿಲ್ಲ. ಆದರೆ ಕೆಡವಲು ಮಾರ್ಗಸೂಚಿಗಳು ಇರಬೇಕು ಎಂದು ಪೀಠವು ಒತ್ತಿಹೇಳಿತು.