ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಕೈಕೋಳದ ಚುನಾವಣಾ ಚಿಹ್ನೆ ಕೋರಿದ್ದ ಅರ್ಜಿಗೆ ಸುಪ್ರೀಂ ನಕಾರ
ಸುಪ್ರೀಂ | Photo: PTI
ಹೊಸದಿಲ್ಲಿ : ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಕೈಕೋಳದ ಚುನಾವಣಾ ಚಿಹ್ನೆಯನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿತು.
ಇದು ನೀತಿಗಳ ವಿಷಯವಾಗಿದೆ. ಹೀಗಾಗಿ ಅರ್ಜಿಯನ್ನು ಅಂಗೀಕರಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತಿಳಿಸಿತು.
‘ನಾವು ಅದನ್ನು ಹೇಗೆ ಮಾಡಬಲ್ಲೆವು? ಇದು ನೀತಿಗಳ ವಿಷಯವಾಗಿದೆ. ಕೈಕೋಳವನ್ನು ಚುನಾವಣಾ ಚಿಹ್ನೆಯನ್ನಾಗಿಸಿ ಎಂದು ನಾವು ಅವರಿಗೆ (ಚುನಾವಣಾ ಆಯೋಗ) ಸೂಚಿಸುವಂತಿಲ್ಲ. ನೀವು ಅರ್ಜಿಯನ್ನು ಹಿಂದೆಗೆದುಕೊಳ್ಳಿ’ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೂ ಒಳಗೊಂಡಿದ್ದ ಪೀಠವು ಅರ್ಜಿದಾರರಿಗೆ ಸೂಚಿಸಿತು.
ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಪೀಠವು ನಿರಾಕರಿಸಿದ್ದರಿಂದ ಅರ್ಜಿದಾರರ ಪರ ವಕೀಲರು ಪ್ರಕರಣವನ್ನು ಹಿಂದೆಗೆದುಕೊಂಡರು. ಸುಧೀರ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.