ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು : ಸುಪ್ರೀಂ ಕೋರ್ಟ್
ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಗೆ ಗಡುವು ನಿಗದಿಪಡಿಸಿದ ಸುಪ್ರೀಂ ಕೋರ್ಟ್!

Photo | indiatoday
ಹೊಸದಿಲ್ಲಿ : ರಾಜ್ಯಪಾಲರು ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಸೂದೆಗಳ ವಿಲೇವಾರಿ ಬಗ್ಗೆ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್ ಗಡುವು ನಿಗದಿಪಡಿಸಿದೆ.
ಬಾಕಿ ಉಳಿದಿರುವ ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿದ ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತ್ತು.
ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪನ್ನು ನೀಡುವಾಗ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ಪೀಠವು, 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಕಾರ್ಯನಿರ್ವಹಣೆಯು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದೆ.
ವಿಧಿ 201ರ ಪ್ರಕಾರ, ರಾಜ್ಯಪಾಲರು ಮಸೂದೆಯನ್ನು ಕಾಯ್ದಿರಿಸಿದಾಗ, ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡಬೇಕು ಅಥವಾ ಒಪ್ಪಿಗೆ ನೀಡದೆ ತಡೆಹಿಡಿಯುವುದಾಗಿ ಘೋಷಿಸಬೇಕು. ಆದರೆ, ಸಂವಿಧಾನದಲ್ಲಿ ಯಾವುದೇ ಕಾಲಮಿತಿ ಒದಗಿಸಿಲ್ಲ.
ರಾಷ್ಟ್ರಪತಿಗಳು ಈ ವಿಚಾರದಲ್ಲಿ ʼಪಾಕೆಟ್ ವೀಟೋʼ ಅಧಿಕಾರವನ್ನು ಹೊಂದಿಲ್ಲ. ಅವರು ಮಸೂದೆಗೆ ಒಪ್ಪಿಗೆ ನೀಡಬೇಕು ಅಥವಾ ತಡೆಹಿಡಿಯಬೇಕು. ಕಾನೂನಿನ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಚಲಾಯಿಸಲು ಯಾವುದೇ ಸಮಯದ ಮಿತಿಯನ್ನು ಸೂಚಿಸದಿದ್ದರೂ ಸಹ ಅದನ್ನು ಸಮಂಜಸವಾದ ಸಮಯದೊಳಗೆ ಚಲಾಯಿಸಬೇಕು ಎಂದು ಕಾನೂನಿನ ನಿಲುವಾಗಿದೆ. ಮೂರು ತಿಂಗಳ ಅವಧಿ ಮೀರಿ ವಿಳಂಬವಾದಲ್ಲಿ ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ತಿಳಿಸಿದೆ.