ದಾಖಲೆಗಳನ್ನು ನಿರಾಕರಿಸುವುದು ಆರೋಪಿಗಳ ಸ್ವಾತಂತ್ರ್ಯ ಉಲ್ಲಂಘನೆಯಲ್ಲವೇ? : ಈಡಿಯನ್ನು ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ತನಿಖೆ ಸಂದರ್ಭದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ದಾಖಲೆಗಳನ್ನು ಮರಳಿಸಲು ನಿರಾಕರಿಸುವುದು ಬದುಕುವ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಿರಾಕರಣೆಯಾಗುವುದಿಲ್ಲವೇ ಎಂಬ ಕಠಿಣ ಪ್ರಶ್ನೆಯನ್ನು ಕೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಬುಧವಾರ ಜಾರಿ ನಿರ್ದೇಶನಾಲಯ(ಈಡಿ)ವನ್ನು ತರಾಟೆಗೆತ್ತಿಕೊಂಡಿತು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾಖಲೆಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ,ಎ.ಅಮಾನುಲ್ಲಾ ಮತ್ತು ಎ.ಜಿ.ಮಸಿಹ್ ಅವರ ಪೀಠವು ಕೈಗೆತ್ತಿಕೊಂಡಿತ್ತು. 2022ರ ಸರಳಾ ಗುಪ್ತಾ ವಿರುದ್ಧ ಈಡಿ ಪ್ರಕರಣವು,ವಿಚಾರಣಾ ಪೂರ್ವ ಹಂತದಲ್ಲಿ ಈಡಿ ಪಿಎಂಎಲ್ಎ ಪ್ರಕರಣದಲ್ಲಿ ತಾನು ಅವಲಂಬಿಸಿರುವ ಪ್ರಮುಖ ದಾಖಲೆಗಳನ್ನು ಆರೋಪಿಗಳಿಗೆ ಒದಗಿಸುವುದನ್ನು ನಿರಾಕರಿಸಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್, ಆಪ್ ನಾಯಕ ಮನೀಷ್ ಸಿಸೋದಿಯಾ ಮತ್ತು ಬಿಆರ್ಎಸ್ ನಾಯಕಿ ಕೆ.ಕವಿತಾ ಸೇರಿದಂತೆ ಉನ್ನತ ರಾಜಕಾರಣಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ)ಯಡಿ ಬಂಧಿಸಿದ ಬಳಿಕ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಈ ಕಾಯ್ದೆಯು ಚರ್ಚೆಯ ವಸ್ತುವಾಗಿದೆ.
ಬುಧವಾರ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ಕೇವಲ ತಾಂತ್ರಿಕ ಕಾರಣದಿಂದ ಆರೋಪಿಗೆ ದಾಖಲೆ ನೀಡುವುದನ್ನು ನಿರಾಕರಿಸಬಹುದೇ ಎಂದು ಪ್ರಶ್ನಿಸಿತು. ಪ್ರತಿಯೊಂದೂ ಏಕೆ ಪಾರದರ್ಶಕವಾಗಿರಬಾರದು ಎಂದು ನ್ಯಾ.ಅಮಾನುಲ್ಲಾ ಪ್ರಶ್ನಿಸಿದರು.
ಈಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ದಾಖಲೆಗಳು ಇವೆ ಎಂದು ಗೊತ್ತಿದ್ದರೆ ಆರೋಪಿಯು ಅವುಗಳನ್ನು ಕೇಳಬಹುದು. ಆದರೆ ಆರೋಪಿಗೆ ಗೊತ್ತಿಲ್ಲದಿದ್ದಾಗ ಕೇವಲ ಊಹೆಯ ಆಧಾರದಲ್ಲಿ ಆತ ಹಕ್ಕು ಮಂಡಿಸುವಂತಿಲ್ಲ ಎಂದು ಉತ್ತರಿಸಿದರು.
ಇದು ಬದುಕುವ ಮತ್ತು ಸ್ವಾತಂತ್ರ್ಯದ ಖಾತರಿಯನ್ನು ನೀಡಿರುವ ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲವೇ ಎಂದು ನ್ಯಾಯಾಲಯವು ಕೇಳಿತು.
ಅಲ್ಲದೆ ಪಿಎಂಎಲ್ಎ ಪ್ರಕರಣದಲ್ಲಿ ನೀವು ಸಾವಿರಾರು ದಾಖಲೆಗಳನ್ನು ವಶಪಡಿಸಿಕೊಂಡಿರಬಹುದು. ಆದರೆ ಅವುಗಳಲ್ಲಿ ಕೇವಲ 50ನ್ನು ನೀವು ನೆಚ್ಚಿಕೊಳ್ಳುತ್ತೀರಿ. ಆರೋಪಿಗೆ ಪ್ರತಿಯೊಂದೂ ದಾಖಲೆಯು ನೆನಪಿನಲ್ಲಿ ಇರದಿರಬಹುದು. ಆಗ ಆತ ತನ್ನ ಸ್ಥಳದಿಂದ ವಶಪಡಿಸಿಕೊಳ್ಳಲಾದ ದಾಖಲೆಗಳನ್ನೆಲ್ಲ ಕೇಳಬಹುದು ಎಂದು ನ್ಯಾ.ಓಕಾ ಹೇಳಿದರು.
ಆರೋಪಿಯು ದಾಖಲೆಗಳ ಪಟ್ಟಿಯನ್ನು ಹೊಂದಿರುತ್ತಾನೆ ಮತ್ತು ‘ಅಗತ್ಯ’ ಹಾಗೂ ‘ಅಪೇಕ್ಷಣಿಯ’ವಲ್ಲದಿದ್ದರೆ ಆತ ದಾಖಲೆಗಳನ್ನು ಕೇಳುವಂತಿಲ್ಲ ಎಂದು ರಾಜು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಆರೋಪಿಯು ಸಾವಿರಾರು ಪುಟಗಳ ದಾಖಲೆಯನ್ನು ಕೋರಿದರೆ ಕೆಲವೇ ನಿಮಿಷಗಳಲ್ಲಿ ಅವುಗಳನ್ನು ಸುಲಭವಾಗಿ ಸ್ಕ್ಯಾನ್ ಮಾಡಬಹುದು ಎಂದು ಪೀಠವು ಹೇಳಿತು.
ಕಾಲವು ಬದಲಾಗುತ್ತಿದೆ ಎಂದು ಬೆಟ್ಟು ಮಾಡಿದ ನ್ಯಾ.ಓಕಾ, ‘ನಾವು ಮತ್ತು ಇನ್ನೊಂದೆಡೆ ವಕೀಲರು ನ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿರುತ್ತೇವೆ. ವ್ಯಕ್ತಿಯು ಕಾನೂನು ಕ್ರಮವನ್ನು ಎದುರಿಸುತ್ತಿರುವಾಗ ದಾಖಲೆಗಳು ಸಂರಕ್ಷಿತವಾಗಿವೆ ಎಂದು ಹೇಳುವಷ್ಟು ಕಾಠಿಣ್ಯವನ್ನು ನಾವು ಹೊಂದಿದ್ದೇವೆಯೇ? ಇದು ನ್ಯಾಯವೇ? ಜಾಮೀನು ನೀಡಲಾಗಿರುವ ಘೋರ ಪ್ರಕರಣಗಳಿವೆ,ಆದರೆ ಇಂದು ಜನರಿಗೆ ಮ್ಯಾಜಿಸ್ಟ್ರೇಟ್ ಪ್ರಕರಣಗಳಲ್ಲೂ ಜಾಮೀನು ಸಿಗುತ್ತಿಲ್ಲ. ಕಾಲವು ಬದಲಾಗುತ್ತಿದೆ. ಒಂದು ಪೀಠವಾಗಿ ನಾವು ಅಷ್ಟೊಂದು ಕಠಿಣರಾಗಬಹುದೇ?’ ಎಂದು ಪ್ರಶ್ನಿಸಿದರು.
ಆರೋಪಿಯು ಜಾಮೀನು ಪಡೆಯಲು ಅಥವಾ ಪ್ರಕರಣವನ್ನು ವಜಾಗೊಳಿಸಲು ದಾಖಲೆಗಳನ್ನು ನೆಚ್ಚಿಕೊಂಡಿದ್ದರೆ ಅವುಗಳನ್ನು ಕೋರುವ ಹಕ್ಕು ಆತನಿಗೆ/ಆಕೆಗೆ ಇದೆ ಎಂದು ನ್ಯಾಯಾಲಯವು ಹೇಳಿದಾಗ ಇದನ್ನು ವಿರೋಧಿಸಿದ ರಾಜು, ಇಲ್ಲ ಇಂತಹ ಯಾವುದೇ ಹಕ್ಕು ಇಲ್ಲ. ಇದನ್ನು ಪರಿಶೀಲಿಸುವಂತೆ ಆರೋಪಿ ನ್ಯಾಯಾಲಯವನ್ನು ಕೋರಿಕೊಳ್ಳಬಹುದು. ಇಂತಹ ಯಾವುದೇ ದಾಖಲೆಯಿಲ್ಲ ಮತ್ತು ದೋಷನಿರ್ಣಯದ ಸ್ಪಷ್ಟ ಪ್ರಕರಣವಾಗಿದೆ ಎಂದಿದ್ದರೆ ಆರೋಪಿಯು ಕೇವಲ ವಿಚಾರಣೆಯನ್ನು ವಿಳಂಬಿಸಲು ಉದ್ದೇಶಿಸಿರುತ್ತಾನೆ ಮತ್ತು ಇದನ್ನು ಹಕ್ಕು ಎನ್ನುವಂತಿಲ್ಲ ಎಂದರು.
ನ್ಯಾಯಾಲಯವು ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದರಿಸಿದೆ.