ಒಳ ಮೀಸಲಾತಿಗೆ ಸಮ್ಮತಿ | ಎಸ್‌ಸಿ/ಎಸ್‌ಟಿ ಸಮುದಾಯಗಳ ಶ್ರೀಮಂತರನ್ನು ಮೀಸಲಾತಿಯಿಂದ ಹೊರಗಿಡಬೇಕು : ಸುಪ್ರೀಂ ತೀರ್ಪು
ಹೊಸದಿಲ್ಲಿ: ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಗಳಲ್ಲಿರುವ ‘‘ಕೆನೆಪದರ’’ (ಶ್ರೀಮಂತರು)ವನ್ನು ರಾಜ್ಯಗಳು ಗುರುತಿಸಬೇಕು ಮತ್ತು ಅವರನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಒಳಗೆ ಒಳ ಮೀಸಲಾತಿ ನೀಡಬೇಕು ಎಂಬ ಅರ್ಜಿಯ ಕುರಿತು ತೀರ್ಪು ನೀಡಿರುವ ಸರ್ವೋಚ್ಛ ನ್ಯಾಯಾಲಯ ಈ ನಿರ್ದೇಶನವನ್ನು ನೀಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಇರುವ ಹೆಚ್ಚು ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವಂತೆ ನೋಡಿಕೊಳ್ಳಲು ಈ ಸಮುದಾಯಗಳಲ್ಲೇ ಉಪ-ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಬಹುದಾಗಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಸದಸ್ಯರ ಸಂವಿಧಾನ ಪೀಠವು ತನ್ನ 6:1ರ ಬಹುಮತದ ತೀರ್ಪಿನಲ್ಲಿ ಹೇಳಿದೆ.
ಸಾಮಾಜಿಕ ಸಮಾನತೆಯ ತತ್ವಗಳ ಆಧಾರದಲ್ಲಿ, ಸರಕಾರವು ಪರಿಶಿಷ್ಟ ಜಾತಿಗಳಲ್ಲೇ ಇರುವ ಅತ್ಯಂತ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿತು.
ಈ ಸಂವಿಧಾನ ಪೀಠದಲ್ಲಿ ಮುಖ್ಯ ನ್ಯಾಯಾಧೀಶರಲ್ಲದೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ವಿಕ್ರಮ್‌ನಾಥ್, ಬೇಲಾ ಎಮ್. ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್‌ಚಂದ್ರ ಶರ್ಮ ಇದ್ದರು.
ಪೀಠವು ಆರು ಪ್ರತ್ಯೇಕ ತೀರ್ಪುಗಳನ್ನು ನೀಡಿತು. ಆರು ನ್ಯಾಯಾಧೀಶರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಉಪ ವರ್ಗೀಕರಣವನ್ನು ಎತ್ತಿಹಿಡಿದರೆ, ನ್ಯಾ. ಬೇಲಾ ತ್ರಿವೇದಿ ಭಿನ್ನ ತೀರ್ಪು ನೀಡಿದರು.
ಆರು ನ್ಯಾಯಾಧೀಶರ ಪೈಕಿ ನಾಲ್ವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂಬ ತೀರ್ಪನ್ನು ನೀಡಿದರು.
‘‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿರುವ ಕೆನೆಪದರವನ್ನು ಗುರುತಿಸಲು ಸರಕಾರವು ನೀತಿಯೊಂದನ್ನು ರೂಪಿಸಬೇಕು ಮತ್ತು ಅವರನ್ನು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಿಡಬೇಕು’’ ಎಂದು ನ್ಯಾ. ಗವಾಯಿ ತನ್ನ ತೀರ್ಪಿನಲ್ಲಿ ಬರೆದಿದ್ದಾರೆ.
‘‘ನನ್ನ ದೃಷ್ಟಿಯಲ್ಲಿ, ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿರುವ ‘ನೈಜ ಸಮಾನತೆ’ಯನ್ನು ಸಾಧಿಸಲು ಇದು ಏಕೈಕ ವಿಧಾನವಾಗಿದೆ’’ ಎಂದು ಅವರು ಹೇಳಿದ್ದಾರೆ.
ನ್ಯಾ. ಸತೀಶ್‌ಚಂದ್ರ ಶರ್ಮ ಕೂಡ ನ್ಯಾ. ಗವಾಯಿ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿರುವ ಕೆನೆಪದರವನ್ನು ಗುರುತಿಸುವ ಕಾರ್ಯವು ಸರಕಾರಕ್ಕೆ ಸಾಂವಿಧಾನಿಕ ಬದ್ಧತೆಯಾಗಬೇಕು ಎಂದು ಹೇಳಿದ್ದಾರೆ.
2018ರಲ್ಲಿ, ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಅನ್ವಯವಾಗುವ ಕ್ರೀಮಿ ಲೇಯರ್ ನೀತಿಯನ್ನು ಭಡ್ತಿಗಳಲ್ಲಿ ಮೀಸಲಾತಿ ನೀಡುವಾಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೂ ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
► ‘ಕ್ರೀಮಿ ಲೇಯರ್’ ಎಂದರೇನು?
ಮೀಸಲಾತಿ ಪಡೆಯುವ ವರ್ಗಗಳಲ್ಲಿರುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ಜನರ ವರ್ಗವನ್ನು ಕ್ರೀಮಿ ಲೇಯರ್ ಎಂದು ಕರೆಯಲಾಗುತ್ತದೆ. ಪ್ರಸಕ್ತ, ‘ಕ್ರೀಮಿ ಲೇಯರ್’ನ ಕಲ್ಪನೆ ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಮೀಸಲಾತಿಗೆ ಮಾತ್ರ ಅನ್ವಯಿಸುತ್ತದೆ.
ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿ, ವಾರ್ಷಿಕ ವರಮಾನ ರೂಪಾಯಿ 8 ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬಗಳು ಕ್ರೀಮಿ ಲೇಯರ್ ನ ವ್ಯಾಪ್ತಿಗೆ ಬರುತ್ತವೆ.
► ಪರಿಶಿಷ್ಟ ಜಾತಿ/ಪಂಗಡ ಸಮುದಾಯವು ಏಕರೂಪ ವರ್ಗವಲ್ಲ
ಗುರುವಾರ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ನೀಡಿರುವ ಬಹುಮತದ ತೀರ್ಪು, 2004ರಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವೊಂದು ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳನ್ನು ಏಕರೂಪದ ವರ್ಗಗಳು ಎಂಬುದಾಗಿ ಪರಿಗಣಿಸಲಾಗಿರುವುದರಿಂದ ಇಲ್ಲಿ ಒಳ ಮೀಸಲಾತಿಗೆ ಅವಕಾಶವಿಲ್ಲ ಎಂದು ನ್ಯಾಯಾಲಯ 2004ರಲ್ಲಿ ಹೇಳಿತ್ತು.
2006ರ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಉದ್ಯೋಗಗಳಲ್ಲಿ ಮೀಸಲಾತಿ) ಕಾಯ್ದೆಯ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗುರುವಾರ ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬಿದ್ದಿದೆ. ಈ ಕಾಯ್ದೆಯಲ್ಲಿ, ಮೀಸಲಾತಿ ಪಡೆಯುವ ಸಮುದಾಯಗಳ ಉಪ-ವರ್ಗೀಕರಣ ಮಾಡಲಾಗಿತ್ತು.
ಪರಿಶಿಷ್ಟ ಜಾತಿಗಳು ಏಕರೂಪದ ಗುಂಪಲ್ಲ ಹಾಗೂ ಪರಿಶಿಷ್ಟ ಜಾತಿಗಳಲ್ಲೇ ಹೆಚ್ಚು ಶೋಷಣೆಗೆ ಒಳಗಾಗಿರುವ ಜಾತಿಗಳಿಗೆ ಶೇ.15 ಮೀಸಲಾತಿಯಲ್ಲಿ ಹೆಚ್ಚಿನ ಪ್ರಮಾಣವನ್ನು ನೀಡಲು ಸರಕಾರಗಳು ಉಪ-ವರ್ಗೀಕರಣ ಮಾಡಬಹುದಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
‘‘ವ್ಯವಸ್ಥೆಯೊಳಗಡೆಯೇ ಇರುವ ತಾರತಮ್ಯದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಏಣಿಯನ್ನು ಹತ್ತಲು ಸಾಧ್ಯವಾಗುತ್ತಿಲ್ಲ. ಸಂವಿಧಾನದ 14ನೇ ವಿಧಿಯು ಜಾತಿಯ ಉಪ ವರ್ಗೀಕರಣಕ್ಕೆ ಅವಕಾಶ ನೀಡುತ್ತದೆ. ಒಂದು ವರ್ಗವು ಏಕರೂಪವಾಗಿದೆಯೇ ಅಥವಾ ಒಂದು ವರ್ಗಕ್ಕೆ ಒಂದು ಉದ್ದೇಶಕ್ಕಾಗಿ ವಿಲೀನಗೊಳ್ಳಲು ಸಾಧ್ಯವಾಗದಿದ್ದರೆ ಅದರಲ್ಲಿ ಹೆಚ್ಚಿನ ವರ್ಗೀಕರಣ ಮಾಡಬಹುದೇ ಎನ್ನುವುದನ್ನು ನ್ಯಾಯಾಲಯ ಪರಿಶೀಲಿಸಬೇಕು’’ ಎಂದು ತನ್ನ ತೀರ್ಪಿನಲ್ಲಿ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ನೇತೃತ್ವದ ಪೀಠವು ಹೇಳಿತು.
► ಭಿನ್ನ ತೀರ್ಪುಗಳು
ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ತನಗಾಗಿ ಮತ್ತು ನ್ಯಾ. ಮಿಶ್ರಾ ಅವರಿಗಾಗಿ ತೀರ್ಪು ಬರೆದರು. ನಾಲ್ವರು ನ್ಯಾಯಾಧೀಶರು ಸಹಮತದ ತೀರ್ಪುಗಳನ್ನು ಬರೆದರು.
ಈ ಪ್ರಕರಣದಲ್ಲಿ ಬೇಲಾ ತ್ರಿವೇದಿ ಏಕೈಕ ಭಿನ್ನ ತೀರ್ಪು ಬರೆದರು. ಅವರು ಬಹುಮತದ ತೀರ್ಪಿಗೆ ವಿರುದ್ಧವಾದ ತೀರ್ಪು ಬರೆದು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಉಪ ವರ್ಗೀಕರಣ ಮಾಡುವಂತಿಲ್ಲ ಎಂದು ಹೇಳಿದರು.
ಪಂಜಾಬ್, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಇಂಥ ಉಪ ವರ್ಗೀರಣಗಳಿಗೆ ಅವಕಾಶ ನೀಡುವ ಕಾನೂನುಗಳ ಮಾನ್ಯತೆಯನ್ನೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು.