ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಫ್ರಾನ್ಸ್ ನಲ್ಲಿ ತಡೆಹಿಡಿಯಲ್ಪಟ್ಟಿದ್ದ ವಿಮಾನ ಮುಂಬೈಗೆ ವಾಪಾಸು
Photo: PTI
ಮುಂಬೈ: ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಫ್ರಾನ್ಸ್ ನಲ್ಲಿ ತಡೆಹಿಡಿಯಲ್ಪಟ್ಟಿದ್ದ ವಿಮಾನ ಮುಂಬೈಗೆ ಮರಳಿದೆ. ನಿಕರಾಗುವಕ್ಕೆ ಹೋಗುತ್ತಿದ್ದ ಖಾಸಗಿ ವಿಶೇಷ ವಿಮಾನದಲ್ಲಿ 276 ಮಂದಿ ಪ್ರಯಾಣಿಕರಿದ್ದು, ಈ ಪೈಕಿ ಬಹುತೇಕ ಮಂದಿ ಭಾರತೀಯರಾಗಿದ್ದರು.
ರುಮೇನಿಯಾ ಕಂಪನಿ ಕಾರ್ಯಾಚರಣೆ ಮಾಡುತ್ತಿದ್ದ ಈ ವಿಮಾನ ನಿಕರಾಗುವಕ್ಕೆ ಹೋಗುತ್ತಿತ್ತು. ಇದನ್ನು ಫ್ರಾನ್ಸ್ ನ ವಟ್ರಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ವಟ್ರಿ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ ಈ ವಿಮಾನ ಹೊರಟಿದ್ದು, ಮಂಗಳವಾರ ಮುಂಜಾನೆ 4 ಗಂಟೆಗೆ ಮುಂಬೈಗೆ ಆಗಮಿಸಿದೆ. ವಿಸ್ತರಿತ ಅವಧಿಗೆ ವಿಮಾನವನ್ನು ಅಲ್ಲೇ ಇರಿಸಿಕೊಂಡಿರುವುದು ವದಂತಿಗಳಿಗೆ ಕಾರಣವಾಗಿದೆ.
ದುಬೈನಿಂದ 303 ಪ್ರಯಾಣಿಕರೊಂದಿಗೆ ಹೊರಟಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ನ ಈ ವಿಮಾನವನ್ನು ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಪ್ಯಾರೀಸ್ ನ 150 ಕಿಲೋಮೀಟರ್ ದೂರದ ವಟ್ರಿ ವಿಮಾನ ನಿಲ್ದಾಣದಲ್ಲಿ ಕಳೆದ ಗುರುವಾರ ಇಳಿಸಲಾಗಿತ್ತು. ಈ ಪೈಕಿ ಅಪ್ರಾಪ್ತ ವಯಸ್ಸಿನ ಇಬ್ಬರು ಸೇರಿದಂತೆ ಒಟ್ಟು 25 ಮಂದಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿ ಅಲ್ಲೇ ಉಳಿದಿದ್ದಾರೆ. ಇತರ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಇವರನ್ನು ನೆರವಿನ ಸಾಕ್ಷಿ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಫ್ರಾನ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾನುವಾರ ವಟ್ರಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕ ಕೋರ್ಟ್ರೂಂ ಆಗಿ ಪರಿವರ್ತಿಸಿ, ಪ್ಯಾರೀಸ್ ನ ಅಭಿಯೋಜಕರ ಕಚೇರಿ ನಡೆಸಿದ ತನಿಖೆಯ ಅಂಗವಾಗಿ ಬಂಧಿತ ಪ್ರಯಾಣಿಕರ ವಿಚಾರಣೆ ನಡೆಸಲಾಯಿತು.