ಸಂಸದರ ಅಮಾನತು ಸಂಸದೀಯ ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಹಾನಿಕಾರಕ: ಧನ್ಕರ್ಗೆ ಖರ್ಗೆ ಪತ್ರ
Photo: PTI
ಹೊಸದಿಲ್ಲಿ: ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಂಸದರ ಅಮಾನತು ಭಾರತದ ಸಂಸದೀಯ ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಹಾನಿಕಾರಕವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸಭಾಪತಿ ಜಗದೀಪ್ ಧನ್ಕರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇಷ್ಟೊಂದು ಸಂಸದರನ್ನು ಅಮಾನತುಗೊಳಿಸಿರುವುದು ತನಗೆ ನೋವನ್ನುಂಟು ಮಾಡಿದೆ, ಹತಾಶೆ ಮತ್ತು ನಿರಾಶೆಯ ಭಾವನೆಯು ತನ್ನನ್ನು ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ ಸಭಾಪತಿಗಳ ಬಗ್ಗೆ ನಂಬಿಕೆಯನ್ನು ವ್ಯಕ್ತಪಡಿಸಿರುವ ಖರ್ಗೆ, ಅವರು ಎಲ್ಲ ಸಮಯದಲ್ಲಿಯೂ ಪ್ರತಿಪಕ್ಷಗಳ ಕಳವಳಗಳಿಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಪರಸ್ಪರ ನಿರ್ಧರಿತ ದಿನಾಂಕದಂದು ತನ್ನೊಂದಿಗೆ ವಿಷಯವನ್ನು ಚರ್ಚಿಸುವಂತೆ ಮತ್ತು ಎಲ್ಲ ಕಳವಳಗಳನ್ನು ಪರಿಹರಿಸುವಂತೆ ಅವರು ಧನ್ಕರ್ ಅವರನ್ನು ಆಗ್ರಹಿಸಿದ್ದಾರೆ.
ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ತಾನು ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ಆಧಾರ ಸ್ತಂಭಗಳಾದ ಮಾತುಕತೆ ಮತ್ತು ಚರ್ಚೆಯಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದೇನೆ ಎಂದಿರುವ ಖರ್ಗೆ, ‘ಸಂಸತ್ ಭದ್ರತೆ ಉಲ್ಲಂಘನೆ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಿತ ನಿಯಮಗಳಡಿ ಹಲವಾರು ನೋಟಿಸ್ಗಳನ್ನು ನೀಡಲಾಗಿತ್ತು. ಈ ವಿಷಯದಲ್ಲಿ ಅರ್ಥಪೂರ್ಣ ಚರ್ಚೆಗೆ ಪ್ರತಿಪಕ್ಷಗಳು ಸಿದ್ಧವಾಗಿದ್ದವು. ಈ ನೋಟಿಸ್ಗಳನ್ನು ಸ್ವೀಕರಿಸಲಾಗಿರಲಿಲ್ಲ,ಪ್ರತಿಪಕ್ಷ ನಾಯಕನಾಗಿ ನನಗೆ ಅಥವಾ ಪ್ರತಿಪಕ್ಷಗಳ ಇತರ ಸದಸ್ಯರಿಗೆ ಸದನದಲ್ಲಿ ಒಂದೆರಡು ನಿಮಿಷಗಳ ಕಾಲವೂ ಮಾತನಾಡಲು ಅನುಮತಿಯನ್ನು ನೀಡಲಾಗಿರಲಿಲ್ಲ. ಇದು ವಿಷಾದನೀಯವಾಗಿದೆ. ಸರಕಾರವು ತನ್ನದೇ ಆದ ಮಾರ್ಗವನ್ನು ಹೊಂದಿರುತ್ತದೆ,ಆದರೆ ಪ್ರತಿಪಕ್ಷಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿರಬೇಕು ಎನ್ನುವುದನ್ನು ನೀವು ಒಪ್ಪಲೇಬೇಕು. ಸಂಸದೀಯ ಪ್ರಜಾಪ್ರಭುತ್ವದ ಈ ಮೂಲತತ್ತ್ವವನ್ನು ನೀವು ಎತ್ತಿ ಹಿಡಿಯುತ್ತೀರಿ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಂಸತ್ ಭದ್ರತಾ ವೈಫಲ್ಯ ಮತ್ತು ಡಿ.13 ರಂದು ಇಬ್ಬರು ಆರೋಪಿಗಳು ಲೋಕಸಭೆಯ ಗ್ಯಾಲರಿಯನ್ನು ಪ್ರವೇಶಿಸಲು ಅನುಕೂಲ ಕಲ್ಪಿಸುವಲ್ಲಿ ಬಿಜೆಪಿ ಸಂಸದರ ಪಾತ್ರದ ಕುರಿತು ಗೃಹಸಚಿವರು ಸದನದಲ್ಲಿ ಹೇಳಿಕೆ ನೀಡಬೇಕು ಎನ್ನುವುದು ಪ್ರತಿಪಕ್ಷಗಳ ಸ್ಪಷ್ಟ ಬೇಡಿಕೆಯಾಗಿತ್ತು ಎಂದು ಒತ್ತಿ ಹೇಳಿರುವ ಖರ್ಗೆ, ಇದು ಸಂಸತ್ತಿಗೆ ಮತ್ತು ಸಂಸದರಿಗೆ ತೀವ್ರ ಕಳವಳಕಾರಿ ವಿಷಯವಾಗಿದೆ, ಮಹತ್ವದ ರಾಷ್ಟ್ರೀಯ ಭದ್ರತಾ ವಿಷಯವೂ ಆಗಿದೆ. ಆದರೆ ಸಂಸದರ ಬೇಡಿಕೆಯನ್ನು ಖಂಡತುಂಡವಾಗಿ ನಿರಾಕರಿಸಲಾಗಿದೆ. ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ರಾಜಾರೋಷ ಉಲ್ಲಂಘಿಸಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.