ಎಲ್ಲ ಹಿಂದೂಗಳು ಒಗ್ಗಟ್ಟಾದರೆ ಟಿಎಂಸಿ ಮಣ್ಣು ಮುಕ್ಕುತ್ತದೆ: ಸುವೇಂದು ಅಧಿಕಾರಿ ವಿವಾದಾತ್ಮಕ ಹೇಳಿಕೆ

PC: PTI
ಹೊಸದಿಲ್ಲಿ: ಹಿಂದೂಗಳು ಹಿಂದೂಸ್ತಾನವನ್ನು ಆಳುತ್ತಾರೆ ಮತ್ತು ಹಿಂದೂಗಳ ಪರವಾಗಿ ಕೆಲಸ ಮಾಡುವವರು ಪಶ್ಚಿಮ ಬಂಗಾಳವನ್ನು ಆಳುತ್ತಾರೆ. ಎಲ್ಲ ಹಿಂದೂಗಳು ಒಗ್ಗಟ್ಟಾದರೆ ಟಿಎಂಸಿ ಮಣ್ಣು ಮುಕ್ಕುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದಾರೆ. ಎಪ್ರಿಲ್ 6ರಂದು ರಾಮ ನವಮಿ ಆಚರಿಸಲು ರಾಜ್ಯ ಸಜ್ಜಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.
ರಾಜ್ಯದ ವಿವಿಧೆಡೆ ರಾಮ ನವಮಿಯಂದು ಒಂದು ಕೋಟಿ ಹಿಂದೂಗಳು 20 ಸಾವಿರ ಮೆರವಣಿಗೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಘೋಷಿಸಿದ ಸುವೇಂದು, ಈ ಉತ್ಸವಕ್ಕೆ ತಡೆಯೊಡ್ಡುವ ಯಾವುದೇ ಪ್ರಯತ್ನವನ್ನು ಪ್ರಬಲವಾಗಿ ವಿರೋಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
"ಮಮತಾ ಬ್ಯಾನರ್ಜಿ ಅಧಿಕಾರದಲ್ಲಿ ಮುಂದುವರಿದರೆ, ಬಾಂಗ್ಲಾದೇಶದ ಸ್ಥಿತಿ ರಾಜ್ಯಕ್ಕೂ ಬರಲಿದೆ. ಅವರ ಆಡಳಿತದ ದಿನಗಣನೆ ಆರಂಭವಾಗಿದೆ. ಒಂದು ಸಮುದಾಯವನ್ನು ಓಲೈಸುವ ಮತ್ತು ರಾಮ ನವಮಿ ಉತ್ಸವವನ್ನು ಹತ್ತಿಕ್ಕುವ ಅವರ ನಿಲುವನ್ನು ಹಿಂದೂಗಳು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.
"ಸೈಂಥಿಯಾದಲ್ಲಿ ದಲಿತರ ಮೇಲೆ ಹೋಳಿಹಬ್ಬದ ದಿನ ದಾಳಿ ನಡೆದಿದೆ. ಆದರೆ ದಾಳಿಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸನಾತನೀಯರ ವಿರುದ್ಧದ ಹಿಂಸೆಯನ್ನು ಮುಚ್ಚಿಹಾಕಲು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಚರ್ಚಿಸಲು ವಿಧಾನಸಭೆಯಲ್ಲೂ ಅವಕಾಶ ನೀಡಿಲ್ಲ" ಎಂದು ಅವರು ಆಪಾದಿಸಿದ್ದಾರೆ.