ರೂ. 3 ಕೋಟಿ ಲಂಚ ಪ್ರಕರಣ: ಕೇಂದ್ರೀಯ ತನಿಖಾ ಸಂಸ್ಥೆ ಕಚೇರಿಗಳಲ್ಲಿ ತಮಿಳುನಾಡು ಪೊಲೀಸರಿಂದ ಶೋಧ ಕಾರ್ಯ
Photo credit: ANI
ಚೆನ್ನೈ: ರಾಜ್ಯ ಸರ್ಕಾರಿ ನೌಕರನಿಂದ 20 ಲಕ್ಷ ರೂ. ಹಣ ಸುಲಿಗೆ ಮಾಡಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಜಾರಿ ನಿರ್ದೇಶನಾಲಯ (ED) ಅಧಿಕಾರಿಯನ್ನು ಮಧುರೈನಲ್ಲಿ ಬಂಧಿಸಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ನಗರದ ಕೇಂದ್ರೀಯ ಸಂಸ್ಥೆಯಾದ ಇಡಿ ಕಚೇರಿಗಳು ಮತ್ತು ಅಧಿಕಾರಿಯ ನಿವಾಸವನ್ನು ಶೋಧಿಸುತ್ತಿದ್ದು, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿರುವುದು ಇದೇ ಮೊದಲು.
ಬಂಧಿತ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ಡಿಸೆಂಬರ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆದರೆ, ಈ ಕುರಿತು ಜಾರಿ ನಿರ್ದೇಶನಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈಗಾಗಲೇ ಇತ್ಯರ್ಥವಾಗಿರುವ ಪ್ರಕರಣದಲ್ಲಿ "ಕಾನೂನು ಕ್ರಮವನ್ನು ತಪ್ಪಿಸಲು" ಆರೋಪಿ ತಿವಾರಿ ರೂ. 3 ಕೋಟಿಗೆ ಬೇಡಿಕೆಯಿಟ್ಟಿದ್ದರು. ಅಕ್ಟೋಬರ್ 29 ರಂದು ಸರ್ಕಾರಿ ನೌಕರನನ್ನು ಸಂಪರ್ಕಿಸಿದ್ದ ತಿವಾರಿ, ತಾನು ಪ್ರಧಾನ ಮಂತ್ರಿ ಕಚೇರಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದರು ಎಂದು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಹೇಳಿದೆ.
ಅದಾಗ್ಯೂ, ನಂತರ ತನ್ನ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಲಂಚದ ಮೊತ್ತವನ್ನು 3 ಕೋಟಿ ರೂ.ಗಳಿಂದ 51 ಲಕ್ಷ ರೂ.ಗಳಿಗೆ ಇಳಿಸುವುದಾಗಿ ಸರ್ಕಾರಿ ನೌಕರನ ಬಳಿ ಹೇಳಿದ್ದರು.
ಅದರಂತೆ, ಮೊದಲ ಕಂತು ರೂ. 20 ಲಕ್ಷವನ್ನು ನವೆಂಬರ್ 1 ರಂದು ಪಾವತಿಸಲಾಗಿದ್ದು, ನಂತರ ಉಳಿದ ರೂ. 31 ಲಕ್ಷಕ್ಕಾಗಿ ಸರ್ಕಾರಿ ಉದ್ಯೋಗಿಗೆ ತಿವಾರಿ ಕಿರುಕುಳ ನೀಡಿದ್ದರು. ಸಂತ್ರಸ್ತ ಸರ್ಕಾರಿ ನೌಕರ ನವೆಂಬರ್ 30 ರಂದು ಡಿವಿಎಸಿಗೆ ದೂರು ಸಲ್ಲಿಸಿದ್ದು, ಅದರಂತೆ ಶುಕ್ರವಾರ ಅಂಕಿತ್ ತಿವಾರಿ ಅವರನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ವಿಜಿಲೆನ್ಸ್ ಏಳಿದೆ.
ತಿವಾರಿ ಅವರು ಇತರರಿಗೆ ಬೆದರಿಕೆ ಅಥವಾ ಬ್ಲ್ಯಾಕ್ಮೇಲ್ ಮಾಡುವ ಮೂಲಕ ಹಣವನ್ನು ಪಡೆದಿದ್ದಾರೆಯೇ ಎಂದು ಡಿವಿಎಸಿ ತನಿಖೆ ನಡೆಸುತ್ತಿದೆ.
ಕೇಂದ್ರ ಸರ್ಕಾರ ಇಡಿ ಮೊದಲಾದ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತಮಿಳುನಾಡು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದ ಬೆನ್ನಲ್ಲೇ ಇಡಿ ಅಧಿಕಾರಿಯನ್ನು ತಮಿಳುನಾಡು ಅಧಿಕಾರಿಗಳು ಬಂಧಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.