ತಮಿಳುನಾಡು: ಭಾರೀ ಮಳೆ , ವಿದ್ಯುತ್ ಆಘಾತದಿಂದ ಮೂವರು ಸಾವು
Photo: ANI
ಚೆನ್ನೈ: ತಮಿಳುನಾಡಿನಲ್ಲಿ ಧಾರಾಕಾರ ಮಳೆ ಗುರುವಾರ ಕೂಡ ಮುಂದುವರಿದಿದ್ದು, ಚೆನ್ನೈಯಲ್ಲಿ ವಿದ್ಯುತ್ ಆಘಾತದಿಂದ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಒಟ್ಟೇರಿಯ ತಮಿಳರಸಿ (70) ಮೈಲಪೋರೆಯ ಬಾಲಕ (13) ಹಾಗೂ ಚೆನ್ನೈನ ಮಹಿಳೆ (45) ಗುರುತಿಸಲಾಗಿದೆ.
ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಕಾಂಚಿಪುರಂ ಹಾಗೂ ಚೆಂಗಲಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಭಾರೀ ಮಳೆಯಿಂದಾಗಿ ಇಂದು ಬೆಳಗ್ಗೆ ಚೆನ್ನೈಯ ಹಲವು ಪ್ರದೇಶಗಳಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ ಚೆನ್ನೈ ಸಂಚಾರ ಪೊಲೀಸ್, ನಾಲ್ಕು ಸಬ್ವೇಗಳನ್ನು ಬಂದ್ ಮಾಡಲಾಗಿದೆ ಹಾಗೂ ಜಲಾವೃತವಾದ 7 ಪ್ರದೇಶಗಳಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ ಎಂದು ತಿಳಿಸಿದೆ.
ತಿರುವಳ್ಳೂರು ಜಿಲ್ಲಾಧಿಕಾರಿ ಟ್ವೀಟ್ ಮಾಡಿ, ‘‘ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೆಡ್ ಹಿಲ್ಸ್ ಅಣೆಕಟ್ಟಿನಿಂದ 750 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಒಳಹರಿವು ಸುಮಾರು 2000 ಕ್ಯೂಸೆಕ್ಸ್ ಇದೆ. ಹೆಚ್ಚುವರಿ ನಾಲೆಯ ದಡದ ತಗ್ಗು ಪ್ರದೇಶದಲ್ಲಿ ವಾಸಿಸುವವರು ಎಚ್ಚರಿಕೆ ವಹಿಸಬೇಕು’’ ಎಂದು ಹೇಳಿದೆ.
ಚೆಂಬ್ರಂಬಕ್ಕಂ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಲಾಗಿದೆ. ಈ ನಡುವೆ ಚೆನ್ನೈ ಮೆಟ್ರೊ ರೈಲು ಸೇವೆಯನ್ನು ನವೆಂಬರ್ 30ರಂದು ರಾತ್ರಿ 11 ಗಂಟೆಯಿಂದ 12 ಗಂಟೆ ವರೆಗೆ ವಿಸ್ತರಿಸಲಾಗಿದೆ. ಕೊನೆಯ ಮೆಟ್ರೊ ರೈಲು ಎಲ್ಲಾ ಟರ್ಮಿನಲ್ಗಳಿಂದ ರಾತ್ರಿ 12 ಗಂಟೆಗೆ ತೆರಳಿದೆ.
ನಗರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ರೈಲುಗಳ ಸಮಯ ವಿಸ್ತರಣೆಯಿಂದ ಪ್ರಯಾಣಿಕರು ತಮ್ಮ ಮನೆಯನ್ನು ಸುರಕ್ಷಿತವಾಗಿ ತಲುಪಲು ಸಾಧ್ಯವಾಗಿದೆ.