ತಮಿಳುನಾಡು| ದಲಿತ ಮಹಿಳೆ ಸಿದ್ಧಪಡಿಸಿದ ಅಡುಗೆಯನ್ನು ಸೇವಿಸಲು ನಿರಾಕರಿಸಿದ ವಿದ್ಯಾರ್ಥಿಗಳು: ಜಿಲ್ಲಾಧಿಕಾರಿ ಮಧ್ಯಪ್ರವೇಶ
Photo credit: thenewsminute.com
ಕರೂರು (ತಮಿಳುನಾಡು): ದಲಿತ ಮಹಿಳೆಯೊಬ್ಬರು ತಯಾರಿಸಿದ ಊಟ ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸಿದ ಘಟನೆ ನಡೆದಿದ್ದು, ಸುದ್ದಿ ತಿಳಿಯುತ್ತಲೇ, ಪಂಚಾಯತ್ ಒಕ್ಕೂಟ ಪ್ರಾಥಮಿಕ ಶಾಲೆಗೆ ಕರೂರು ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪರಿಶಿಷ್ಟ ಜಾತಿಗೆ ಸೇರಿರುವ ಅರುಂಧತಿಯಾರ್ ಸಮುದಾಯದ ಸುಮತಿ ಎಂಬವರು ಸಿದ್ಧಪಡಿಸಿದ್ದ ಭೋಜನವನ್ನು ಒಗ್ಗಟ್ಟಿನ ಪ್ರದರ್ಶನದ ಭಾಗವಾಗಿ ಜಿಲ್ಲಾಧಿಕಾರಿ ಸೇವಿಸಿದರು. ಅಡುಗೆ ಕಾರ್ಯಕರ್ತೆಯು ದಲಿತ ಸಮುದಾಯಕ್ಕೆ ಸೇರಿರುವುದರಿಂದ, ಶಾಲೆಗಳಲ್ಲಿ ನೂತನವಾಗಿ ಪರಿಚಯಿಸಲಾಗಿರುವ ಉಪಾಹಾರ ಯೋಜನೆಯಲ್ಲಿ ಶಾಲೆಯ ಅರ್ಧದಷ್ಟು ವಿದ್ಯಾರ್ಥಿಗಳು ಉಪಸ್ಥಿತರಿರಲಿಲ್ಲ. ನಂತರ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಸರ್ಕಾರ ನೇಮಿಸಿರುವ ಅಡುಗೆ ಕಾರ್ಯಕರ್ತೆಯ ವಿರುದ್ಧದ ತಾರತಮ್ಯವನ್ನು ಮುಂದುವರಿಸಿದರೆ ಆಗಲಿರುವ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದರು ಎಂದು thenewsminute.com ವರದಿ ಮಾಡಿದೆ.
ಈ ಘಟನೆಯು ಕರೂರು ಜಿಲ್ಲೆಯ, ಅರವಾಕುರಿಚಿ ಬಳಿಯ ವೆಲಾಂಚೆಟ್ಟಿಯೂರ್ ಗ್ರಾಮದ ಪಂಚಾಯತ್ ಒಕ್ಕೂಟ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ಶಾಲೆಯಲ್ಲಿ 27 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ, ಹಿಂದುಳಿದ ವರ್ಗಗಳು ಹಾಗೂ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಪೋಷಕರು, ಉಪಾಹಾರವನ್ನು ದಲಿತ ಸಮುದಾಯದ ಮಹಿಳೆ ಸಿದ್ಧಪಡಿಸುತ್ತಾಳೆ ಎಂಬ ಒಂದೇ ಕಾರಣಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ ಮತ್ತು ಆಕೆ ಸಿದ್ಧಪಡಿಸಿದ ಉಪಾಹಾರ ಸೇವನೆ ಮಾಡದಂತೆ ತಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಸುಮತಿ ಸಿದ್ಧಪಡಿಸುತ್ತಿರುವ ಆಹಾರವನ್ನು ಸೇವಿಸಲು ಮೂರಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಸಮುದಾಯಗಳು ವಿರೋಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಭುಶಂಕರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ.
ಪೋಷಕರೊಂದಿಗೆ ಜಿಲ್ಲಾಧಿಕಾರಿಗಳು ನಡೆಸಿದ ಸಂವಾದ ಸಭೆಯಲ್ಲಿ ತೊಟ್ಟಿಯ ನಾಯ್ಕರ್ ಸಮುದಾಯ(ಅತಿ ಹಿಂದುಳಿದ ವರ್ಗ)ಕ್ಕೆ ಸೇರಿರುವ ವ್ಯಕ್ತಿಯೊಬ್ಬ ಸುಮತಿ ವಿರುದ್ಧ ಪ್ರತಿಭಟಿಸಿದ್ದು, ಆಕೆ ಶಾಲೆಯಲ್ಲಿ ಕೆಲಸ ನಿರ್ವಹಿಸಲು ಮುಂದುವರಿಸಿದರೆ ನನ್ನ ಮಕ್ಕಳು ಆಹಾರ ಸೇವಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ. ಈ ಮಾತಿನಿಂದ ಸಭೆಯಲ್ಲಿ ವಾಗ್ವಾದಗಳು ನಡೆದಿದ್ದು, ಸದರಿ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಈ ಕುರಿತು thenewsminurte.com ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪ್ರಭು ಶಂಕರ್, “ಬೆಳಗ್ಗಿನ ಉಪಾಹಾರ ಯೋಜನೆಯು ಜಾರಿಯಾದ ಒಂದೆರಡು ದಿನಗಳಿಂದ ಅರ್ಧದಷ್ಟು ವಿದ್ಯಾರ್ಥಿಗಳು ಉಪಾಹಾರವನ್ನು ಸೇವಿಸದಿರುವ ವಿಷಯ ನಮ್ಮ ಗಮನಕ್ಕೆ ಬಂದಿತು. ನಮ್ಮ ಅಧಿಕಾರಿಯೊಬ್ಬರು ಸ್ಥಳಕ್ಕೆ ತೆರಳಿ, ಈ ಕುರಿತು ವಿಚಾರಿಸಿದಾಗ, ಅದಕ್ಕೆ ಕಾರಣವಾಗಿರುವ ಸವರ್ಣೀಯ ಹಿಂದೂಗಳು ಹಾಗೂ ಅರುಂಧತಿಯಾರ್ ಸಮುದಾಯದ ನಡುವಿನ ತಾರತಮ್ಯ ಗಮನಕ್ಕೆ ಬಂದಿತು. ಅವರೆಲ್ಲ ಸುಮತಿ ಅಡುಗೆ ಕಾರ್ಯಕರ್ತೆಯಾಗಿ ಮುಂದುವರಿಯುವುದನ್ನು ವಿರೋಧಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.