ತಮಿಳುನಾಡು: ಲಿಪ್ ಸ್ಟಿಕ್ ಹಚ್ಚಿದ್ದಕ್ಕೆ ಮಹಿಳಾ ದಫೇದಾರ್ ವರ್ಗಾವಣೆ!
ಎಸ್.ಬಿ.ಮಾಧವಿ ( ಎಡ ಭಾಗದಲ್ಲಿರುವವರು) PC: TOI
ಚೆನ್ನೈ: ಅಧಿಕೃತ ಕಾರ್ಯಕ್ರಮವೊಂದರಲ್ಲಿ ಲಿಪ್ಸ್ಟಿಕ್ ಹಚ್ಚಬಾರದು ಎಂಬ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ನ ಪ್ರಥಮ ಮಹಿಳಾ ದಫೇದಾರ್ ಅವರನ್ನು ವರ್ಗಾಯಿಸಿದ ಘಟನೆ ಬೆಳಕಿಗೆ ಬಂದಿದೆ.
ಮೇಯರ್ ಪರಿವಾರದ ಭಾಗವಾಗಿದ್ದ ಎಸ್.ಬಿ.ಮಾಧವಿ (50) ವರ್ಗಾವಣೆ ಶಿಕ್ಷೆಗೆ ಒಳಗಾದವರು. ತಮಗೆ ಅಥವಾ ಇತರ ಯಾರಿಗೇ ಆದರೂ ಲಿಪ್ ಸ್ಟಿಕ್ ಹಚ್ಚಬಾರದು ಎಂದು ನೀಡಿರುವ ಆದೇಶಕ್ಕೆ ಸಮರ್ಥನೆ ನೀಡಿ ಎಂದು ಮೇಯರ್ ಆರ್.ಪ್ರಿಯಾ ಅವರ ಆಪ್ತ ಸಹಾಯಕ ಶಿವಶಂಕರ್ ಅವರನ್ನು ಪ್ರಶ್ನಿಸಿದ ಬೆನ್ನಲ್ಲೇ ಮಾಧವಿಯವರನ್ನು ವರ್ಗಾಯಿಸಲಾಗಿದೆ.
"ನೀವು ನನಗೆ ಲಿಪ್ ಸ್ಟಿಕ್ ಹಚ್ಚಬಾರದು ಎಂದು ಸೂಚಿಸಿದ್ದೀರಿ. ಆದರೆ ನಾನು ಹಚ್ಚಿದ್ದೇನೆ. ಇದು ಅಪರಾಧವಾದರೆ, ಲಿಪ್ ಸ್ಟಿಕ್ ಹಚ್ಚುವುದನ್ನು ನಿಷೇಧಿಸುವ ಸರ್ಕಾರಿ ಆದೇಶವನ್ನು ತೋರಿಸಿ" ಎಂದು ಶಂಕರ್ ಅವರು ಆಗಸ್ಟ್ 6ರಂದು ನೀಡಿದ ನೋಟಿಸ್ಗೆ ಮಾಧವಿ ಉತ್ತರಿಸಿದರು.
"ಇದು ಗ್ರೇಟರ್ ಚೆನ್ನೈ ಕಾರ್ಪೊರೇಷನ್, ಇಂಥ ಸೂಚನೆಗಳು ಮಾನವ ಹಕ್ಕುಗಳ ಉಲ್ಲಂಘನೆ. ನನ್ನ ಕರ್ತವ್ಯದ ಅವಧಿಯಲ್ಲಿ ನಾನು ಕಾರ್ಯ ನಿರ್ವಹಿಸದಿದ್ದರೆ ಮಾತ್ರ ನಿಮ್ಮ ನೋಟಿಸ್ ಮಾನ್ಯವಾಗುತ್ತದೆ" ಎಂದು ಮಾಧವಿ ಹೇಳಿದ್ದಾರೆ.
ಕರ್ತವ್ಯದಿಂದ ವಿಮುಖರಾಗಿರುವುದು, ಕೆಲಸದ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು ಮತ್ತು ಮೇಲಧಿಕಾರಿಗಳ ಆದೇಶಕ್ಕೆ ಅವಿಧೇಯತೆ ತೋರಿರುವುದು ಮುಂತಾದ ಕಾರಣಗಳನ್ನು ನೋಟಿಸ್ ನಲ್ಲಿ ನೀಡಲಾಗಿದೆ. ಆದ್ದರಿಂದ ಮಾಧವಿಯವರನ್ನು ದಫೇದಾರ್ ಹುದ್ದೆ ಖಾಲಿ ಇದ್ದ ಮನಾಲಿ ವಲಯಕ್ಕೆ ವರ್ಗಾಯಿಸಲಾಗಿದೆ.
ಚೆನ್ನೈ ರಿಪ್ಪನ್ ಬಿಲ್ಡಿಂಗ್ ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಫ್ಯಾಷನ್ ಶೋದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ದಫೇದಾರ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು ಎಂದು ಡಿಎಂಕೆ ಮೇಯರ್ ಪ್ರಿಯಾ ಹೇಳಿದ್ದಾರೆ.
ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿತ್ತು. ದಫೇದಾರ್ ಲಿಪ್ಸ್ಟಿಕ್ ಹಚ್ಚಿದ್ದರು. ಮೇಯರ್ ಕಚೇರಿಗೆ ಸಚಿವರು ಮತ್ತು ರಾಯಭಾರ ಕಚೇರಿ ಅಧಿಕಾರಿಗಳು ಪದೇ ಪದೇ ಭೇಟಿ ನೀಡುವ ಹಿನ್ನೆಲೆಯಲ್ಲಿ ಲಿಪ್ಸ್ಟಿಕ್ ಹಚ್ಚದಂತೆ ಆಪ್ತ ಸಹಾಯಕರು ಕೇಳಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.