ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ಟಾಟಾದಿಂದ 500 ಕೋಟಿ ರೂ. ಹೂಡಿಕೆ

PC: justdial.com
ಮುಂಬೈ: ಭಾರತದ ಅತಿದೊಡ್ಡ ಸಮೂಹ ಸಂಸ್ಥೆಯಾದ ಟಾಟಾ ಗ್ರೂಪ್, ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ 500 ಕೋಟಿ ರೂ.ಗಳ ಕೊಡುಗೆ ನೀಡುವ ಮೂಲಕ ಆರೋಗ್ಯ ಸೇವೆಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಸಜ್ಜಾಗಿದೆ. ಈ ಮೂಲಕ 275 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಸೋಬೋ ಆಸ್ಪತ್ರೆಯ ಸೇವೆಗೆ ನಾವೀನ್ಯತೆ ಒದಗಿಸಲಿದೆ.
ಈ ನಿಧಿಯು 165 ಶತಕೋಟಿ ಡಾಲರ್ ಮೌಲ್ಯದ ಟಾಟಾ ಗ್ರೂಪ್ ಅನ್ನು ಆಸ್ಪತ್ರೆಯ ಅತಿದೊಡ್ಡ ಆರ್ಥಿಕ ಬೆಂಬಲಿಗನನ್ನಾಗಿ ಮಾಡಲಿದೆ. ಪ್ರಸಕ್ತ 14 ಸದಸ್ಯರ ಟ್ರಸ್ಟಿಗಳ ಮಂಡಳಿಗೆ ಮೂವರು ಪ್ರತಿನಿಧಿಗಳು ಹೆಚ್ಚುವರಿಯಾಗಿ ಸೇರಲಿದ್ದಾರೆ. ಟಾಟಾ ಕನ್ಸಲ್ಟಿಂಗ್ ಸರ್ವಿಸ್ ನ ಅಧ್ಯಕ್ಷ ನಟರಾಜನ್ ಚಂದ್ರಶೇಖರ್ ಅವರು ಅಕ್ಟೋಬರ್ 1,2025ರಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಟ್ರಸ್ಟ್ನ ಅಧ್ಯಕ್ಷರನ್ನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಸ್ಪತ್ರೆಯ ಹೆಸರಿನಲ್ಲಿ ಯಾವುದೇ ಬದಲಾವಣೆಗಳಿಲ್ಲದೇ ಟಾಟಾ ತನ್ನ ತನ್ನ ಸೇವೆ ನೀಡಲಿದೆ. ಆ ಮೂಲಕ ಮೂಲಸೌಕರ್ಯ ಮತ್ತು ತಾಂತ್ರಿಕ ಸುಧಾರಣೆಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ.
ಬ್ರೀಚ್ ಕ್ಯಾಂಡಿಯೊಂದಿಗೆ ರತನ್ ಟಾಟಾ ಹೊಂದಿದ್ದ ಆಳವಾದ ಸಂಪರ್ಕ ಈಗ ಹಿಗ್ಗಿದೆ ಎಂದು ಬ್ರೀಚ್ ಕ್ಯಾಂಡಿ ವ್ಯವಸ್ಥಾಪಕ ಟ್ರಸ್ಟಿ ಉದಯ್ ಕಿಲಾಚಂದ್ ಹೇಳಿದ್ದಾರೆ. ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸೆಗಾಗಿ ಪರೇಲ್ನಲ್ಲಿರುವ ಟಾಟಾ ಮೆಮೋರಿಯಲ್ ಸೆಂಟರ್ ಮತ್ತು ಕಳೆದ ವರ್ಷ ಮಹಾಲಕ್ಷ್ಮಿಯಲ್ಲಿ ಸ್ಥಾಪಿಸಲಾದ ಪಶು ಆಸ್ಪತ್ರೆಯ ನಂತರ, ಇದು ಮುಂಬೈನಲ್ಲಿ ಟಾಟಾ ಗ್ರೂಪ್ನ ಮೂರನೇ ಆರೋಗ್ಯ ರಕ್ಷಣಾ ಯೋಜನೆಯಾಗಿದೆ.
1998 ರಲ್ಲಿ ಭಾರತದ ಮೊದಲ ಎಂಆರ್ಐ ಸೌಲಭ್ಯವನ್ನು ಪರಿಚಯಿಸಿದ ಬ್ರೀಚ್ ಕ್ಯಾಂಡಿ ಆಸ್ಪತೆಯನ್ನು 1946 ರಲ್ಲಿ ಸ್ಥಾಪಿಸಲಾಯಿತು. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಕಾರ್ಯನಿವಹಿಸುತ್ತಿದ್ದ ಯುರೋಪಿಯನ್ ಹಾಸ್ಪಿಟಲ್ ಟ್ರಸ್ಟ್, ಯೂನಿಲಿವರ್, ಫೋರ್ಬ್ಸ್ ಮತ್ತು ಕ್ರಾಂಪ್ಟನ್ ಗ್ರೀವ್ಸ್ ಇದಕ್ಕೆ ಆರ್ಥಿಕ ಸಹಕಾರ ನೀಡಿದ್ದವು.