ಮೈಕ್ರೋಸಾಫ್ಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ; ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಯಾನ ಸಹಿತ ಹಲವು ಸೇವೆಗಳು ಬಾಧಿತ
PC : X
ಹೊಸದಿಲ್ಲಿ: ಮೈಕ್ರೋಸಾಫ್ಟ್ 365 ಆ್ಯಪ್ಗಳು ಮತ್ತು ಸೇವೆಗಳಲ್ಲಿ ಇಂದು ಉಂಟಾದ ತಾಂತ್ರಿಕ ವೈಫಲ್ಯವು ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಯಾನ ಮತ್ತಿತರ ಕ್ಷೇತ್ರಗಳ ಸೇವೆಗಳಲ್ಲಿ ವ್ಯತ್ಯಯವುಂಟು ಮಾಡಿದೆ.
ತನ್ನ ಸೇವೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ನಲ್ಲಿ ಬ್ಯಾಂಕ್ಗಳ ಕಂಪ್ಯೂಟರ್ ವ್ಯವಸ್ಥೆಗಳು ಬಾಧಿತವಾಗಿ ಸಮಸ್ಯೆ ಉಂಟಾಗಿದ್ದರೆ ಭಾರತದಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಆಕಾಸಾ, ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಸ್ಜೆಟ್ ಕೂಡ ಸಮಸ್ಯೆಗಳನ್ನು ಎದುರಿಸಿವೆ. ದಿಲ್ಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲೂ ಕೆಲ ಸೇವೆಗಳು ಬಾಧಿತವಾಗಿವೆ. ಹಲವು ವಿಮಾನಯಾನ ಸಂಸ್ಥೆಗಳು ಸೇವೆಯಲ್ಲುಂಟಾದ ವ್ಯತ್ಯಯಗಳ ಬಗ್ಗೆ ಹೇಳಿಕೆಗಳನ್ನು ಬಿಡುಗಡೆಗೊಳಿಸಿವೆ.
ಮೈಕ್ರೋಸಾಫ್ಟ್ ಸೇವೆಯಲ್ಲಿ ತಾಂತ್ರಿಕ ವೈಫಲ್ಯದಿಂದ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಕೂಡ ಸಮಸ್ಯೆಗೀಡಾಗಿದೆ.
ಜಗತ್ತಿನಾದ್ಯಂತ ಲಕ್ಷಾಂತರ ವಿಂಡೋಸ್ ಬಳಕೆದಾರರ ಪರದೆಗಳಲ್ಲಿ ಬ್ಲೂ ಸ್ಕ್ರೀನ್ ಆಫ್ ಡೆತ್ ಕಾಣಿಸಿಕೊಂಡಿದೆ ಹಾಗೂ ಕಂಪ್ಯೂಟರ್ಗಳು ಶಟ್ಡೌನ್ ಆಗಿ ಮರುಆರಂಭಗೊಂಡಿವೆ. ಕೆಲವೆಡೆ ಕಂಪ್ಯೂಟರ್ಗಳು ಸತತವಾಗಿ ಮರುಆರಂಭಗೊಳ್ಳುತ್ತಿವೆ.
ಬ್ಲೂ ಸ್ಕ್ರೀನ್ ದೋಷಗಳನ್ನು ಬ್ಲ್ಯಾಕ್ ಸ್ಕ್ರೀನ್ ದೋಷಗಳು ಅಥವಾ STOP ಕೋಡ್ ದೋಷಗಳೆಂದು ಕರೆಯಲಾಗುತ್ತದೆ.
ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕ್ರಮಗಳು ಮುಂದುವರಿದಿವೆ ಎಂದು ಮೈಕ್ರೋಸಾಫ್ಟ್ ಹೇಳಿದೆ.