ಪ್ರಧಾನಿಯನ್ನು ದೊಡ್ಡಣ್ಣ ಎಂದು ಬಣ್ಣಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ!
ನರೇಂದ್ರ ಮೋದಿ, ರೇವಂತ್ ರೆಡ್ಡಿ | Photo: NDTV
ಹೈದರಾಬಾದ್: “ಪ್ರಧಾನಿ ದೊಡ್ಡಣ್ಣನಿದ್ದಂತೆ. ತೆಲಂಗಾಣವು ಪ್ರಧಾನಿಯ ತವರು ರಾಜ್ಯವಾದ ಗುಜರಾತ್ ನಂತೆ ಪ್ರಗತಿ ಸಾಧಿಸಲು ಅವರ ಬೆಂಬಲ ನಮಗೆ ಬೇಕು” ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳುವ ಮೂಲಕ ಖುದ್ದು ಬಿಜೆಪಿ ನಾಯಕರನ್ನೇ ಅಚ್ಚರಿಗೆ ದೂಡಿದ್ದಾರೆ.
ತೆಲಂಗಾಣ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ವಿದ್ಯುತ್, ರೈಲ್ವೆ ಹಾಗೂ ರಸ್ತೆ ವಲಯಗಳಿಗೆ ಸಂಬಂಧಿಸಿದ ಸುಮಾರು ರೂ. 56,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹಲವಾರು ಪೂರ್ಣಗೊಂಡ ಯೋಜನೆಗಳನ್ನೂ ಅವರು ಉದ್ಘಾಟಿಸಿದರು.
ಈ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, “ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣವು ಕೇಂದ್ರ ಸರಕಾರದೊಂದಿಗೆ ಸಂಘರ್ಷದ ಬದಲು ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ” ಎಂದೂ ಹೇಳಿದರು.
“ಭಾರತವನ್ನು ಐದು ಟ್ರಿಲಿಯನ್ ಆರ್ಥಿಕತೆಯನ್ನಾಗಿಸುವ ಪ್ರಧಾನಿ ಮೋದಿಯವರ ದೂರದೃಷ್ಟಿಗೆ ನನ್ನ ಬೆಂಬಲ ಸೂಚಿಸಲು ಬಯಸುತ್ತೇನೆ. ಅವರ ಈ ಕನಸಿನಲ್ಲಿ ಮುಂಬೈ, ದಿಲ್ಲಿ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ನಂತಹ ಮೆಟ್ರೊಪಾಲಿಟನ್ ನಗರಗಳ ಕೊಡುಗೆ ಇದೆ” ಎಂದು ಅವರು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೇಲೆ ಮೆಚ್ಚುಗೆಯ ಮಳೆಗೆರೆದ ರೇವಂತ್ ರೆಡ್ಡಿಯವರತ್ತ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಮುಗುಳ್ನಕ್ಕರು.
ಇದಕ್ಕೂ ಮುನ್ನ, ಕಾಂಗ್ರೆಸ್ ಸರಕಾರಗಳಿರುವ ರಾಜ್ಯಗಳಿಗೆ ಕೇಂದ್ರ ಸರಕಾರವು ಸಮರ್ಪಕವಾಗಿ ತೆರಿಗೆ ಪಾಲನ್ನು ಹಂಚುತ್ತಿಲ್ಲ ಎಂದು ಕರ್ನಾಟಕ, ಕೇರಳ ಮತ್ತಿತರ ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.