ನಟಿ ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಸಂಬಂಧ ಕಲ್ಪಿಸಿ ವಿವಾದ ಎಬ್ಬಿಸಿದ ತೆಲಂಗಾಣ ಸಚಿವೆ
PC: facebook.com
ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗ ಚೈತನ್ಯ ವಿಚ್ಛೇದನ ಪ್ರಕರಣದಲ್ಲಿ ಭಾರತ ರಾಷ್ಟ್ರ ಸಮಿತಿ ಮುಖಂಡ ಕೆ.ಟಿ.ರಾಮರಾವ್ ಅವರ ಪಾತ್ರವಿದೆ ಎಂದು ಹೇಳಿಕೆ ನೀಡುವ ಮೂಲಕ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗಚೈತನ್ಯ ಅವರ ತಂದೆ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ, ಸಚಿವರ ಹೇಳಿಕೆ ಆಧಾರ ರಹಿತ. ವೈಯಕ್ತಿಕ ಜೀವನವನ್ನು ರಾಜಕೀಯಕ್ಕೆ ಎಳೆಯುವುದು ಅತ್ಯಂತ ಕೀಳುಮಟ್ಟದ್ದು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಾರ್ವಜನಿಕ ವ್ಯಕ್ತಿಗಳು ಘನತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಖಾಸಗಿತನವನ್ನು ಗೌರವಿಸಬೇಕು ಎಂದು ಎಂದು ತಿರುಗೇಟು ನೀಡಿದ್ದಾರೆ.
ಸಚಿವೆ ಹೇಳಿಕೆ ಬಗ್ಗೆ ರಾಮರಾವ್ ಕಾನೂನು ನೋಟಿಸ್ ನೀಡಿದ್ದಾರೆ. ಚಿತ್ರರಂಗದ ಬಗ್ಗೆ ನಿರ್ಲಕ್ಷ್ಯದ ಮತ್ತು ಆಧಾರ ರಹಿತ ಹೇಳಿಕೆ ನೀಡಿರುವುದು ತೀರಾ ಬೇಸರ ತಂದಿದೆ. ಇದು ಅಪ್ರಸ್ತುತ ಮತ್ತು ಸುಳ್ಳು. ನಮ್ಮ ಮೇಲೆ ಆಧಾರ ರಹಿತ ಆರೋಪವನ್ನು ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ಪ್ರತಿಯೊಬ್ಬರ ಘನತೆಯನ್ನು ಗೌರವಿಸಬೇಕು. ಸಚಿವೆ ತಮ್ಮ ಹೇಳಿಕೆಯನ್ನು ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಬಿಆರ್ಎಸ್ ಮುಖಂಡ ಹಾಗೂ ಮಾಜಿ ಸಚಿವ ಹರೀಶ್ ರಾವ್ ತನ್ನೀರು ಆಗ್ರಹಿಸಿದ್ದಾರೆ.