ತೆಲಂಗಾಣ | ಹೈದರಾಬಾದ್ ಟ್ರಾವೆಲ್ ಸಂಸ್ಥೆಯ ವ್ಯವಸ್ಥಾಪಕರ ಮೇಲೆ ಗುಂಡಿನ ದಾಳಿ : ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಹಲವು ಪೊಲೀಸ್ ತಂಡಗಳ ಕಾರ್ಯಾಚರಣೆ
ಆರೋಪಿಗಳು ಬಿಹಾರ ಮೂಲದವರೆಂಬ ಶಂಕೆ

ಹೈದರಾಬಾದ್ : ಹೈದರಾಬಾದ್ ನ ಟ್ರಾವೆಲ್ ಸಂಸ್ಥೆಯೊಂದರ ವ್ಯವಸ್ಥಾಪಕರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಹೈದರಾಬಾದ್ ಪೊಲೀಸ್ ತಂಡ ಸೇರಿದಂತೆ ತೆಲಂಗಾಣದ ಹಲವು ಪೊಲೀಸ್ ತಂಡಗಳು ಸಕ್ರಿಯ ಕಾರ್ಯಾಚರಣೆ ನಡೆಸುತ್ತಿವೆ. ಇಬ್ಬರು ಶಂಕಿತ ಆರೋಪಿಗಳ ಭಾವಚಿತ್ರಗಳನ್ನು ಹಂಚಿಕೊಂಡು ಛತ್ತೀಸ್ ಗಢ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುರುವಾರ ರಾತ್ರಿ ಬೀದರ್ ಎಟಿಎಂ ಒಂದರ ಒರ್ವ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು, ಒರ್ವ ಸಿಬ್ಬಂದಿಯನ್ನು ಗಾಯಗೊಳಿಸಿ, 93 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ಹಂತಕರೇ ಹೈದರಾಬಾದ್ ನ ಟ್ರಾವೆಲ್ ಸಂಸ್ಥೆಯೊಂದರ ವ್ಯವಸ್ಥಾಪಕರ ಮೇಲೆ ಗುಂಡಿನ ದಾಳಿ ನಡೆಸಿರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಬಿಹಾರ ಮೂಲದವರೆಂದು ಶಂಕಿಸಲಾಗಿದೆ. ಗುರುವಾರ ಸಂಜೆ ಅಫ್ಝಲ್ ಗಂಜ್ ಪ್ರದೇಶದಲ್ಲಿ ಗುಂಡಿನ ದಾಳಿಯ ಘಟನೆ ನಡೆದಿದೆ. ಇಬ್ಬರು ಅಪರಿಚಿತರು ಹೈದರಾಬಾದ್ ನಿಂದ ರಾಯ್ಪುರಕ್ಕೆ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಬಸ್ ಟಿಕೆಟ್ ಮುಂಗಡ ಕಾಯ್ದಿರಿಸಲು ಮುಂದಾಗಿದ್ದಾರೆ. ಅವರನ್ನು ರಾಯ್ಪುರಕ್ಕೆ ಮುಖ್ಯ ಬಸ್ ನಲ್ಲಿ ಕಳಿಸಿಕೊಡಲು ಮಿನಿ ಶಟಲ್ ಬಸ್ ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಆದರೆ, ಟ್ರಾವೆಲ್ ಏಜೆನ್ಸಿಯ ವ್ಯವಸ್ಥಾಪಕರು ಅವರ ಬ್ಯಾಗ್ ಗಳನ್ನು ಪರೀಕ್ಷಿಸಬೇಕು ಎಂದು ಪಟ್ಟು ಹಿಡಿದಾಗ, ಆರೋಪಿಗಳ ಪೈಕಿ ಓರ್ವ ವ್ಯಕ್ತಿ ಅವರತ್ತ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಗಾಯಗೊಂಡ ವ್ಯವಸ್ಥಾಪಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ನಂತರ, ಇಬ್ಬರು ಶಂಕಿತ ಆರೋಪಿಗಳು ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದು, ಅವರು ಕೊನೆಯ ಬಾರಿ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಕಾಣಿಸಿದ್ದಾರೆ. ಪೊಲೀಸರು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರಾವೆಲ್ ಏಜೆನ್ಸಿ ಮಾಲಕರ ಸಂಬಂಧಿಯೊಬ್ಬರ ತಿಳಿಸಿರುವ ಪ್ರಕಾರ, ಟ್ರಾವೆಲ್ ಏಜೆನ್ಸಿಯ ವ್ಯವಸ್ಥಾಪಕರು ಇಬ್ಬರ ಪೈಕಿ ಓರ್ವ ಪ್ರಯಾಣಿಕನಿಗೆ ಆತನ ಬ್ಯಾಗ್ ತೋರಿಸುವಂತೆ ಪಟ್ಟು ಹಿಡಿದಿದ್ದಾರೆ. ಆಗ ಬ್ಯಾಗ್ ನಿಂದ ನಗದಿನ ಕಂತೆಯೊಂದನ್ನು ಹೊರ ತೆಗೆದು ಅದನ್ನು ವ್ಯವಸ್ಥಾಪಕರಿಗೆ ನೀಡಲು ಮುಂದಾಗಿದ್ದಾನೆ. ಆದರೆ, ಅದನ್ನು ಸ್ವೀಕರಿಸಲು ನಿರಾಕರಿಸಿರುವ ವ್ಯವಸ್ಥಾಪಕರು, ಮಿನಿ ಬಸ್ ನಿಂದ ಕೆಳಗಿಳಿಯುವಂತೆ ಇಬ್ಬರೂ ಪ್ರಯಾಣಿಕರ ಮೇಲೆ ಒತ್ತಡ ಹೇರಿದ್ದಾರೆ. ಆಗ ಓರ್ವ ಶಂಕಿತ ಆರೋಪಿಯು ದಿಢೀರನೆ ಅವರತ್ತ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳು ಬಿಹಾರದವರೆಂದು ಶಂಕಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ಹೇಳಿದ್ದಾರೆ.
ಬೀದರ್ ಎಸ್.ಬಿ.ಐ ಎಟಿಎಂನ ಒರ್ವ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು, ಒರ್ವ ಸಿಬ್ಬಂದಿಯನ್ನು ಗಾಯಗೊಳಿಸಿ, 93 ಲಕ್ಷ ರೂ. ದೋಚಿ ಪರಾರಿಯಾಗಿರುವ ದರೋಡೆಕೋರರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಶುಕ್ರವಾರ ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.