ತೆಲಂಗಾಣ : ಆರು ಗ್ಯಾರಂಟಿಗಳೊಂದಿಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
Photo: PTI
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಕಾಂಗ್ರೆಸ್ ಶುಕ್ರವಾರ ಇಲ್ಲಿ ಬಿಡುಗಡೆಗೊಳಿಸಿತು. ‘ಬಂಗಾರು ತೆಲಂಗಾಣ’ದ ಕನಸು ನನಸಾಗುವುದನ್ನು ಖಚಿತಪಡಿಸುವ ‘ಅಭಯ ಹಸ್ತಂ ’ನಲ್ಲಿ ಒಟ್ಟು ಆರು ಗ್ಯಾರಂಟಿಗಳನ್ನು ಪಟ್ಟಿ ಮಾಡಲಾಗಿದೆ.
‘ಈ ಪ್ರಣಾಳಿಕೆಯು ನಮ್ಮ ಪಾಲಿಗೆ ಗೀತಾ, ಕುರ್ಆನ್ ಅಥವಾ ಬೈಬಲ್ನಂತೆ. ನಾವು ಇದನ್ನು ಜಾರಿಗೊಳಿಸುತ್ತೇವೆ ’ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಎಲ್ಲ ಆರು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ತೆಲಂಗಾಣದ ಜನತೆಗೆ ಸಾಮಾಜಿಕ ನ್ಯಾಯ,ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಪ್ರಗತಿಯನ್ನು ಒದಗಿಸಲು ಕಾಂಗ್ರೆಸ್ ಸಂಕಲ್ಪವನ್ನು ಮಾಡಿದೆ ಎಂದರು.
ಪ್ರಣಾಳಿಕೆಯಲ್ಲಿನ ಕಾಂಗ್ರೆಸ್ ಘೋಷಣೆಗಳು:
► ‘ಮಹಾಲಕ್ಷ್ಮಿ’ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂ.ಆರ್ಥಿಕ ನೆರವು, 500 ರೂ.ಗೆ ಎಲ್ಪಿಜಿ ಸಿಲಿಂಡರ್ ಮತ್ತು ಉಚಿತ ಪ್ರಯಾಣ ಸೌಲಭ್ಯ
► ‘ಗೃಹ ಜ್ಯೋತಿ’ಯೋಜನೆಯಡಿ ರಾಜ್ಯದ ಎಲ್ಲ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್
►‘ಇಂದಿರಮ್ಮ ಇಂಡ್ಲು ’ಯೋಜನೆಯಡಿ ಸ್ವಂತ ಮನೆಯಿಲ್ಲದ ಕುಟುಂಬಗಳಿಗೆ ವಸತಿ ನಿವೇಶನ ಮತ್ತು ಮನೆ ನಿರ್ಮಾಣಕ್ಕಾಗಿ ಐದು ಲ.ರೂ.
► ‘ಯುವ ವಿಕಾಸಂ’ಯೋಜನೆಯಡಿ ವಿದ್ಯಾರ್ಥಿಗಳಿಗೆ ಐದು ಲ.ರೂ.ಗಳ ಆರ್ಥಿಕ ನೆರವು
► ಎಲ್ಲ ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚ.ಗಜಗಳ ವಸತಿ ನಿವೇಶನ
► ‘‘ಚೆಯುತ ’ಯೋಜನೆಯಡಿ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಸೇಂದಿ ತೆಗೆಯುವವರು, ನೇಕಾರರು, ಏಡ್ಸ್ ಮತ್ತು ಫೈಲೇರಿಯಾ ರೋಗಿಗಳು ಹಾಗೂ ಡಯಾಲಿಸಿಸ್ ಗೆ ಒಳಗಾಗುತ್ತಿರುವ ಮೂತ್ರಪಿಂಡ ರೋಗಿಗಳಿಗೆ ಮಾಸಿಕ 4,000 ರೂ.ಗಳ ಪಿಂಚಣಿ
10 ಲ.ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.
ಶನಿವಾರ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.
ತೆಲಂಗಾಣ ವಿಧಾನಸಭೆಗೆ ನ.30ರಂದು ಚುನಾವಣೆ ನಡೆಯಲಿದ್ದು, ಡಿ.3ರಂದು ಮತಗಳ ಎಣಿಕೆ ನಡೆಯಲಿದೆ.