ಇಂಡಿಯನ್ ಮುಜಾಹಿದೀನ್ ನಲ್ಲೂ 'INDIA' ಇದೆ ಎಂದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು
ಹೊಸದಿಲ್ಲಿ: ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಹಾಗೂ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ಮೈತ್ರಿಕೂಟ INDIAದ ಮೇಲೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ಟ್ವಿಟರ್ ನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷದ ಒಕ್ಕೂಟವು ಮಣಿಪುರದ ನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಹಾಗೂ ಈಶಾನ್ಯ ರಾಜ್ಯದಲ್ಲಿ ಭಾರತದ ಕಲ್ಪನೆಯನ್ನು ಪುನರ್ನಿರ್ಮಿಸುತ್ತದೆ ಎಂದು ಹೇಳಿದರು.
"ಮಿಸ್ಟರ್ ಮೋದಿ, ನಮ್ಮ ಕುರಿತು ನಿಮಗೆ ಇಷ್ಟಬಂದಿದ್ದನ್ನು ಮಾತಾಡಿ. ನಾವು INDIA. ನಾವು ಮಣಿಪುರವನ್ನು ಗುಣಪಡಿಸಲು ಹಾಗೂ ಪ್ರತಿ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸಲು ಸಹಾಯ ಮಾಡುತ್ತೇವೆ. ನಾವು ಎಲ್ಲಾ ಜನರಿಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುತ್ತೇವೆ. ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹೀದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಎಲ್ಲದರಲ್ಲೂ ಭಾರತ(INDIA)ಇದೆ. ಹಾಗೆಂದ ಮಾತ್ರಕ್ಕೆ ಭಾರತ ಎಂದರೆ ಎಲ್ಲವೂ ಅಲ್ಲ. ದೇಶದ ಹೆಸರನ್ನು ಬಳಸಿಕೊಂಡು ಜನತೆಯನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾಗಿ ಮಾಜಿ ಕೇಂದ್ರ ಸಚಿವ ರವಿ ಶಂಕರ ಪ್ರಸಾದ್ ತಿಳಿಸಿದ್ದಾರೆ.