ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ಬಿಜೆಪಿ ನಾಯಕನಿಗೆ ಅಂತ್ಯಕ್ರಿಯೆಗೂ ಮುನ್ನ ಮರಳಿದ ಪ್ರಜ್ಞೆ !
ಹೊಸದಿಲ್ಲಿ: ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದಾಗಿ ಆಗ್ರಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮಹೇಶ್ ಬಘೇಲ್ (65) ಅವರನ್ನು ರವಿವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರನ್ನು ನಗರದ ಪುಷ್ಪಾಂಜಲಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಹೀಗಾಗಿ ಸೋಮವಾರ ಕುಟುಂಬದ ಸದಸ್ಯರು ಅವರ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸುತ್ತಿರುವಾಗ ಅವರಿಗೆ ಪವಾಡಸದೃಶವಾಗಿ ಪ್ರಜ್ಞೆ ಮರಳಿದ್ದು, ಅದನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲ ದಿಗ್ಭ್ರಾಂತರಾಗಿರುವ ಘಟನೆ ನಡೆದಿದೆ ಎಂದು theprint.in ವರದಿ ಮಾಡಿದೆ.
ರವಿವಾರ ರಾತ್ರಿ ನಗರದ ಮಾಜಿ ಬಿಜೆಪಿ ಅಧ್ಯಕ್ಷರ ಆರೋಗ್ಯ ಸ್ಥಿತಿ ವಿಷಮಿಸಿತ್ತು. ಅವರನ್ನು ಸಂಪೂರ್ಣ ದೈಹಿಕ ತಪಾಸಣೆಗೆ ಒಳಪಡಿಸಿದ್ದ ವೈದ್ಯರು ಅಂಗಾಂಗ ವೈಫಲ್ಯದ ಕಾರಣಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಇದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎಂದು ಕುಟುಂಬದ ಸದಸ್ಯರಿಗೆ ತಿಳಿಸಿರುವ ವೈದ್ಯರು, ಅವರನ್ನು ಮರಳಿ ಮನೆಗೆ ಕರೆದೊಯ್ಯುವುದೇ ಉತ್ತಮ ಎಂದು ಅವರಿಗೆ ಸಲಹೆ ನೀಡಿದ್ದಾರೆ ಎಂದು Hindustan Times ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಘೇಲ್ ಅವರನ್ನು ಮನೆಗೆ ಮರಳಿ ಕರೆ ತರಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಸುಮಾರು 30 ನಿಮಿಷಗಳ ಅಂತರದಲ್ಲಿ ಅವರ ದೇಹದಲ್ಲಿ ಚಲನೆ ಕಂಡು ಬಂದಿದೆ. ಇದನ್ನು ಕಂಡು ಆಘಾತಗೊಂಡಿರುವ ಅವರ ಸಂಬಂಧಿಕರು, ಕೂಡಲೇ ಅವರನ್ನು ನ್ಯೂ ಆಗ್ರಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ, ಅಲ್ಲಿನ ವೈದ್ಯರು ಬಘೇಲ್ ಜೀವಂತವಾಗಿದ್ದಾರೆ ಎಂದು ಪ್ರಕಟಿಸಿದ್ದಾರೆ.
ರಾಜಕಾರಣಿ ಮಹೇಶ್ ಬಘೇಲ್ ಅವರ ಸಾವಿನ ಸುದ್ದಿ ತಿಳಿದು ಅವರ ನಿವಾಸದತ್ತ ಪಕ್ಷದ ಕಾರ್ಯಕರ್ತರು ಹಾಗೂ ಅವರ ಇತರ ಸಂಬಂಧಿಕರು ಸೇರಿದಂತೆ ದೊಡ್ಡ ಜನಜಂಗುಳಿ ಹರಿದು ಬಂದಿತ್ತು.
ಈ ಸುದ್ದಿಯು ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಿಪ್ರವಾಗಿ ಹಂಚಿಕೆಯಾಗಿದ್ದರಿಂದ, ಮಾಜಿ ರಾಜಕೀಯ ನಾಯಕನಿಗೆ ಶ್ರದ್ಧಾಂಜಲಿ ಹಾಗೂ ಗೌರವದ ಮಹಾಪೂರವೇ ಹರಿದು ಬಂದಿತ್ತು. ಸದ್ಯ, ಅವರು ಬದುಕುಳಿಯುವಂತಾಗಲಿ ಹಾಗೂ ಶೀಘ್ರ ಚೇತರಿಸಿಕೊಳ್ಳಲಿ ಎಂದು ಜನರು ಹಾರೈಸುತ್ತಿದ್ದಾರೆ.