ಕಾರಿನಲ್ಲಿ ಸಹೋದರರ ಮೃತ್ಯು ಪ್ರಕರಣ | ಹಲವು ವರ್ಷಗಳಿಂದ ಮುಚ್ಚಿದ್ದ ಕಾರಿನ ಲಾಕ್ ಮಕ್ಕಳು ತೆರೆದಿದ್ದು ಹೇಗೆ?
PC: indianexpress.com
ಮುಂಬೈ: ಇಲ್ಲಿನ ಅಂಟಾಪ್ ಹಿಲ್ ಪ್ರದೇಶದಲ್ಲಿ ಹಲವು ವರ್ಷಗಳಿಂದ ನಿಂತಿದ್ದ ಕಾರಿನಲ್ಲಿ ಐದು ಹಾಗೂ ಏಳು ವರ್ಷದ ಇಬ್ಬರು ಮಕ್ಕಳ ಶವ ಪತ್ತೆಯಾದ ಬೆನ್ನಲ್ಲೇ, ಮರ್ಸಿಡೆಸ್ ಕಾರಿನ ಬಾಗಿಲನ್ನು ಮಕ್ಕಳು ತೆರೆಯಲು ಸಾಧ್ಯವಾದದ್ದು ಹೇಗೆ ಎನ್ನುವುದು ಅಚ್ಚರಿ ಮೂಡಿಸಿದೆ ಎಂದು ಕಾರಿನ ಡೀಲರ್ ಹೇಳಿದ್ದಾರೆ. ಹಲವು ತಿಂಗಳುಗಳಿಂದ ಜಾಮ್ ಆಗಿದ್ದ ಬಾಗಿಲನ್ನು ವಯಸ್ಕರು ಕೂಡಾ ತೆರೆಯುವುದು ಕಷ್ಟವಾಗಿದ್ದು, ಮಕ್ಕಳು ಹೇಗೆ ತೆರೆಯಲು ಸಾಧ್ಯವಾಯಿತು ಎನ್ನುವುದು ಅಚ್ಚರಿಯ ವಿಚಾರ ಎಂದು ಅವರು ಹೇಳಿದ್ದಾರೆ.
"ಈ ಕಾರು ನನಗೆ ಸೇರಿದ್ದಲ್ಲ; ಬೇರೆಯವರಿಗೆ ಸೇರಿದ್ದು, ಇದನ್ನು ಮಾರಾಟ ಮಾಡಲು ನನಗೆ 2017ರಲ್ಲಿ ನೀಡಿದ್ದರು. ಆದರೆ ಕಾರು ಹಾಳಾಗಿ ದುರಸ್ತಿ ಮಾಡಲು ಸಾಧ್ಯವಾಗಿರಲಿಲ್ಲ" ಎಂದು ಅವರು ಹೇಳಿದ್ದಾರೆ. ಈ ಕಾರನ್ನು ವಿಲೇವಾರಿ ಮಾಡುವ ಸಲುವಾಗಿ ಎರಡು ತಿಂಗಳ ಹಿಂದೆ ಅದರನ್ನು ಗುಜರಿಯವರಿಗೆ ತೋರಿಸಿದ್ದಾಗಿ ವಿವರಿಸಿದ್ದಾರೆ.
"ಆದರೆ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಹಲವು ಗಂಟೆಗಳ ಕಾಲ ಪ್ರಯತ್ನ ಮಾಡಿದೆವು. ಬಳಿಕ ಗುಜರಿಯವರು ಪ್ರಯತ್ನ ಬಿಟ್ಟುಬಿಟ್ಟರು. ರಮದಾನ್ ಕಳೆದ ಬಳಿಕ ನೋಡುವುದಾಗಿ ಹೇಳಿದ್ದರು ಎನ್ನುವುದು ರಾಜ್ ಪಾಂಡೆಯವರ ವಿವರಣೆ. ಸಾಜಿದ್ ಶೇಖ್ (7) ಮತ್ತು ಮುಸ್ಕಾನ್ (5) ಅವರ ಶವ ಕಾರಿನಲ್ಲಿ ಪತ್ತೆಯಾಗಿತ್ತು. ಒಳಗೆ ಸಿಕ್ಕಿಹಾಕಿಕೊಂಡ ಅವರು ಉಸಿರುಗಟ್ಟಿ ಮೃತಪಟ್ಟಿದ್ದರು.
ಮಕ್ಕಳು ಕಾರಿನ ಹಿಂದಿನ ಸೀಟಿಗೆ ಆಡಲು ತೆರಳಿರಬೇಕು. ಬಾಗಿಲು ಜಾಮ್ ಆಗಿದ್ದರಿಂದ ಮತ್ತೆ ತೆಗೆಯಲು ಸಾಧ್ಯವಾಗಿಲ್ಲ. ಕಾರಿನಿಂದ ಹೊರ ಬರಲು ಮಾರ್ಗ ಕಾಣದೇ ಭಯಭೀತರಾದ ಮಕ್ಕಳು ಉಸಿರುಗಟ್ಟಿ ಸಾವನ್ನಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ 1.30ರ ವೇಳೆಗೆ ಆಟವಾಡಲು ತೆರಳಿದ್ದ ಮಕ್ಕಳು ಕಾಣೆಯಾಗಿರುವುದು ತಾಯಿ ಸಾಯಿರ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮಕ್ಕಳ ತಂದೆ ಕೂಲಿ ಕಾರ್ಮಿಕನಾಗಿದ್ದರಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಸಂಜೆ 6 ರವರೆಗೂ ಹುಡುಕಾಡಿದರೂ ಮಕ್ಕಳು ಪತ್ತೆಯಾಗದಿದ್ದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಕ್ಕಳನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾತ್ರಿ 10ರ ವರೆಗೂ ಕಾರ್ಯಾಚರಣೆ ನಡೆದಿದೆ. ಬಳಿಕ ಪೊಲೀಸ್ ಸಿಬ್ಬಂದಿಯೊಬ್ಬರು ನಿಂತಿದ್ದ ಕಾರಿನ ಬಳಿ ತೆರಳಿದಾಗ ಕಾರಿನೊಳಗೆ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿದ್ದಾರೆ. ಕಾರು ಲಾಕ್ ಆಗಿರುವುದು ಅವರ ಗಮನಕ್ಕೆ ಬಂದಾಗ, ಬಲ ಪ್ರಯೋಗಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರಿಂದ ಸಾಧ್ಯವಾಗದಾಗ ತಮ್ಮ ಸಹೋದ್ಯೋಗಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಮತ್ತೆ ಇಬ್ಬರೂ ಜೊತೆಗೂಡಿ ಬಾಗಿಲು ತೆರೆಯಲು ಬಲ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.
ಬಾಗಲು ತೆರೆದ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಮಕ್ಕಳನ್ನು ಕೂಡಲೇ, ಆಸ್ಪತ್ರೆಗೆ ಸಾಗಿಸಿದರು. ಅ ವೇಳೆಗಾಗಲೇ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿದರು ಎಂದು ತಿಳಿದು ಬಂದಿದೆ.
ಮೃತಪಟ್ಟ ಮಕ್ಕಳ ಅಂತ್ಯಕ್ರಿಯೆಯನ್ನು ಗುರುವಾರ ನೆರವೇರಿಸಲಾಯಿತು ಎಂದ ವರದಿಯಾಗಿದೆ.
ಸೌಜನ್ಯ : indianexpress.com