ಮಣಿಪುರ ವಿಡಿಯೊವನ್ನು ತೆಗೆದು ಹಾಕುವಂತೆ ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ |Photo: PTI
ಹೊಸ ದಿಲ್ಲಿ: ಕುಕಿ-ಝೋಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ನಡೆಸಿರುವ ಪುರುಷರ ಗುಂಪೊಂದು, ನಂತರ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊವನ್ನು ತೆಗೆದು ಹಾಕುವಂತೆ ಟ್ವಿಟರ್ ಮತ್ತಿತರೆ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರ ಸರ್ಕಾರದ ಆಗ್ರಹಕ್ಕೆ ಪ್ರತಿಯಾಗಿ, ಆ ವಿಡಿಯೊವನ್ನು ಹಂಚಿಕೊಂಡಿರುವ ಕೆಲವು ಟ್ವಿಟರ್ ಖಾತೆಗಳ ಟ್ವೀಟ್ ಅನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ ಎಂದು indianexpress.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಸರೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು, "ಮಣಿಪುರ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಮತ್ತಷ್ಟು ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ಆ ವಿಡಿಯೊದ ಕೆಲವು ಕೊಂಡಿಗಳನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ತೆಗೆದು ಹಾಕಲಿವೆ" ಎಂದು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69(A) ಪ್ರಕಾರ, ಸುದ್ದಿಯ ತುಣುಕನ್ನು ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಆದೇಶಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ಆದೇಶಗಳನ್ನು ಗೋಪ್ಯವಾಗಿಡಲಾಗುತ್ತದೆ.
ಎರಡು ತಿಂಗಳ ಹಿಂದೆ ನಡೆದಿದ್ದ ಘಟನೆಯ ವೈರಲ್ ವಿಡಿಯೊ ಕುರಿತು Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಈ ಸಂಬಂಧ ಮೇ 18ರಂದು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಯಾವುದೇ ಪ್ರಾಥಮಿಕ ವರದಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಮೇ 3ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಮರುದಿನವಾದ ಮೇ 4ರ ಮಧ್ಯಾಹ್ನದಂದು ನಮ್ಮ ಗ್ರಾಮ ಪ್ರವೇಶಿಸಿದ ಎಕೆ ರೈಫಲ್ಗಳು, ಎಸ್ಎಲ್ಆರ್, ಐಎನ್ಎಸ್ಎಎಸ್ ಹಾಗೂ .303 ರೈಫಲ್ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 800-1000 ಮಂದಿಯ ಗುಂಪು ನಮ್ಮ ಗ್ರಾಮವನ್ನು ಲೂಟಿ ಮಾಡಿ, ಸುಟ್ಟು ಹಾಕಲು ಶುರು ಮಾಡಿದಾಗ ಆ ಗ್ರಾಮದ ನಿವಾಸಿಗಳಾದ ಮೂರು ಮಂದಿ ಮಹಿಳೆಯರು ಹಾಗೂ ಇಬ್ಬರು ಕಿರಿಯ ವಯಸ್ಸಿನ ಕುಟುಂಬದ ಸದಸ್ಯರೂ ಸೇರಿದಂತೆ ಒಟ್ಟು ಐದು ಮಂದಿಯಾದ ನಾವು ಕಾಡಿನತ್ತ ಪರಾರಿಯಾದೆವು" ಎಂದು ಸಂತ್ರಸ್ತರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ನಮ್ಮನ್ನು ಅಲ್ಲಿಂದ ರಕ್ಷಿಸಿ, ಪೊಲೀಸ್ ಠಾಣೆಗೆ ಕರೆದೊಯ್ಯುವಾಗ, ಪೊಲೀಸ್ ಠಾಣೆಯಿಂದ ಎರಡು ಕಿಮೀ ದೂರದಲ್ಲಿ ನಮ್ಮನ್ನು ಅಡ್ಡಗಟ್ಟಿದ ಗುಂಪೊಂದು, ಪೊಲೀಸರ ವಶದಿಂದ ನಮ್ಮನ್ನು ತಮ್ಮ ವಶಕ್ಕೆ ಪಡೆದುಕೊಂಡಿತು ಎಂದು ಅವರು ಹೇಳಿದ್ದಾರೆ.