ಭಾರತ ತೊರೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳು
Photo: NDTV
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪಾತ್ರ ವಹಿಸಿದ್ದ ಮೂರು ಅಪರಾಧಿಗಳು ಬುಧವಾರ ಬೆಳಗ್ಗೆ ಶ್ರೀಲಂಕಾದ ಕೊಲೊಂಬೊಗೆ ತೆರಳಿದರು. ನವೆಂಬರ್ 2022ರಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ್ದ ಆರು ಮಂದಿ ಕೈದಿಗಳ ಪೈಕಿ ಮುರುಗನ್, ರಾಬರ್ಟ್ ಪಯಾಸ್ ಹಾಗೂ ಜಯಕುಮಾರ್ ಕೂಡಾ ಸೇರಿದ್ದು, ಅವರು ಜೈಲಿನಲ್ಲಿರುವಾಗ, ಅವರ ವರ್ತನೆಯು ತೃಪ್ತಿದಾಯಕವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದಲ್ಲದೆ ಅವರ ಬಿಡುಗಡೆಗೆ ತಮಿಳುನಾಡು ಸರಕಾರ ಕೂಡಾ ಶಿಫಾರಸು ಮಾಡಿದೆ ಎಂದೂ ತಿಳಿಸಿತ್ತು.
ಜೈಲಿನಿಂದ ಬಿಡುಗಡೆಗೊಂಡ ನಂತರ ತಿರುಚಿರಾಪಳ್ಳಿಯಲ್ಲಿನ ವಿಶೇಷ ಶಿಬಿರದಲ್ಲಿರಿಸಲಾಗಿದ್ದ ಈ ಎಲ್ಲ ಮೂವರನ್ನೂ ಪೊಲೀಸ್ ತಂಡವೊಂದರ ಬೆಂಗಾವಲಿನೊಂದಿಗೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಕರೆದೊಯ್ಯಲಾಯಿತು. ಶ್ರೀಲಂಕಾ ಪ್ರಜೆಗಳಾದ ಈ ಮೂವರಿಗೂ ಇತ್ತೀಚೆಗಷ್ಟೆ ಅಲ್ಲಿನ ಸರಕಾರವು ಪಾಸ್ ಪೋರ್ಟ್ ನೀಡಿತ್ತು.
2022ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗಿದ್ದ ಆರು ಮಂದಿಯ ಪೈಕಿ ಓರ್ವರಾಗಿದ್ದ ಭಾರತೀಯ ಪ್ರಜೆ ನಳಿನಿಯ ಪತಿ ಮುರುಗನ್ ಆಗಿದ್ದು, ಆತನನ್ನು ವಿಮಾನ ನಿಲ್ದಾಣದವರೆಗೆ ನಳಿನಿ ಬೀಳ್ಕೊಟ್ಟರು.
ಮೂರು ದಶಕಗಳ ಹಿಂದೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ, ನಳಿನಿ ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ತಿಳಿದು ಮರಣ ದಂಡನೆಗೆ ಗುರಿಯಾಗಿದ್ದ ನಳಿನಿ ಹಾಗೂ ಇನ್ನಿತರರಿಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು. ನಳಿನಿಯ ಪುತ್ರಿಯೀಗ ಬ್ರಿಟನ್ ನಲ್ಲಿ ವೈದ್ಯೆಯಾಗಿದ್ದಾಳೆ.