ಜೈರಾಮ್ ರಮೇಶ್ ಗೆ ಒಂದು ವಾರ ಕಾಲಾವಾಕಾಶ ನೀಡಲು ನಿರಾಕರಿಸಿದ ಚುನಾವಣಾ ಆಯೋಗ
ಅಮಿತ್ ಶಾ ವಿರುದ್ಧದ ಆರೋಪಕ್ಕೆ ಪುರಾವೆ ಒದಗಿಸಲು ನಿರ್ದೇಶನ
ಜೈರಾಮ್ ರಮೇಶ್ | PTI
ಹೊಸದಿಲ್ಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತಾನು ಮಾಡಿರುವ ಆರೋಪಗಳ ಬಗ್ಗೆ ವಿವರಗಳನ್ನು ನೀಡಲು ಒಂದು ವಾರದ ಕಾಲಾವಕಾಶ ನೀಡುವಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಡಿರುವ ಮನವಿಯನ್ನು ಚುನಾವಣಾ ಆಯೋಗ ಸೋಮವಾರ ತಿರಸ್ಕರಿಸಿದೆ.
ಲೋಕಸಭಾ ಚುನಾವಣೆಯ ಮತದಾನ ಕೊನೆಗೊಂಡ ಬಳಿಕ, ಅಮಿತ್ ಶಾ ದೇಶಾದ್ಯಂತದ 150 ಜಿಲ್ಲಾಧಿಕಾರಿಗಳಿಗೆ ಫೋನ್ ಕರೆ ಮಾಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದರು.
‘‘ಈವರೆಗೆ ಅವರು 150 ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಇದು ಸಾರಾಸಗಟು ಬೆದರಿಕೆಯಾಗಿದೆ. ಬಿಜೆಪಿಯು ಎಷ್ಟು ಹತಾಶವಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ. ಆದರೆ, ಒಂದು ವಿಷಯ ಎಲ್ಲರಿಗೂ ಸ್ಪಷ್ಟವಾಗಲಿ- ಜನರ ಇಚ್ಛೆಯೇ ಮೇಲುಗೈ ಪಡೆಯುತ್ತದೆ. ಜೂನ್ 4ರಂದು ಮೋದಿ ಮತ್ತು ಶಾ ನಿರ್ಗಮಿಸುತ್ತಾರೆ ಹಾಗೂ ಬಿಜೆಪಿ ಸೋಲುತ್ತದೆ. ಇಂಡಿಯಾ ಜನಬಂಧನ ವಿಜಯಿಯಾಗಿ ಹೊರಹೊಮ್ಮುತ್ತದೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು ಮತ್ತು ಸಂವಿಧಾನವನ್ನು ಎತ್ತಿಹಿಡಿಯಬೇಕು. ಅವರು ನಿಗಾದಲ್ಲಿದ್ದಾರೆ’’ ಎಂದು ರಮೇಶ್ ಹೇಳಿದ್ದರು.
ತನ್ನ ಆರೋಪಗಳ ಬಗ್ಗೆ ರವಿವಾರ ಸಂಜೆ 7 ಗಂಟೆಯೊಳಗೆ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕನಿಗೆ ನಿರ್ದೇಶನ ನೀಡಿತ್ತು. ಇದಕ್ಕೆ ಉತ್ತರ ಸಲ್ಲಿಸಲು ತನಗೆ ಒಂದು ವಾರ ಸಮಯಾವಕಾಶ ನೀಡುವಂತೆ ಕೋರಿ ರಮೇಶ್ ಸೋಮವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ರಮೇಶ್ ಗೆ ಪತ್ರವೊಂದನ್ನು ಬರೆದಿರುವ ಚುನಾವಣಾ ಆಯೋಗವು, ‘‘ಸಮಯಾವಕಾಶ ಕೋರುವ ನಿಮ್ಮ ಮನವಿಯನ್ನು ಆಯೋಗವು ಈ ಮೂಲಕ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಮತ್ತು ನಿಮ್ಮ ಆರೋಪಗಳಿಗೆ ಪುರಾವೆಗಳೊಂದಿಗೆ ನಿಮ್ಮ ಉತ್ತರವನ್ನು ಇಂದು (ಸೋಮವಾರ) ಸಂಜೆ 7 ಗಂಟೆಯೊಳಗೆ ಸಲ್ಲಿಸುವಂತೆ ನಿಮಗೆ ನಿರ್ದೇಶನ ನೀಡಲಾಗಿದೆ. ಇದಕ್ಕೆ ನೀವು ತಪ್ಪಿದಲ್ಲಿ, ಈ ವಿಷಯದಲ್ಲಿ ಹೇಳಲು ನಿಮಗೆ ಏನೂ ಇಲ್ಲ ಎಂಬುದಾಗಿ ಭಾವಿಸಿ ಆಯೋಗವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ’’ ಎಂದು ಹೇಳಿದೆ.
ಸೋಮವಾರ, ರಮೇಶ್ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಕಮಿಷನರ್ ರಾಜೀವ್ ಕುಮಾರ್, ಗಾಳಿಸುದ್ದಿಗಳನ್ನು ಹರಡುವುದು ಮತ್ತು ಪ್ರತಿಯೊಂದನ್ನೂ ಸಂಶಯಿಸುವುದು ಸರಿಯಲ್ಲ ಎಂದು ಹೇಳಿದರು.
‘‘ಯಾರಾದರೂ ಎಲ್ಲಾ ಜಿಲ್ಲಾಧಿಕಾರಿಗಳು/ಚುನಾವಣಾಧಿಕಾರಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವೇ? ಹೀಗೆ ಯಾರು ಮಾಡಿದರು ಎಂದು ನಮಗೆ ಹೇಳಿ. ಹೀಗೆ ಮಾಡಿರುವ ವ್ಯಕ್ತಿಯನ್ನು ಶಿಕ್ಷಿಸುತ್ತೇವೆ. ನೀವು ಊಹಾಪೋಹಗಳನ್ನು ಹರಡುವುದು ಮತ್ತು ಎಲ್ಲರನ್ನು ಸಂದೇಹಿಸುವುದು ಸರಿಯಲ್ಲ’’ ಎಂದು ಹೇಳಿದರು.
‘‘ಮತಗಳ ಎಣಿಕೆಯು ಚುನಾವಣಾಧಿಕಾರಿಗಳ ಪವಿತ್ರ ಕರ್ತವ್ಯವಾಗಿದೆ. ಹಿರಿಯ, ಜವಾಬ್ದಾರಿಯು ಹಾಗೂ ಅನುಭವಿ ನಾಯಕರೊಬ್ಬರು ಇಂಥ ಸಾರ್ವಜನಿಕ ಹೇಳಿಕೆಗಳು ಜನರ ಮನಸ್ಸಿನಲ್ಲಿ ಸಂಶಯವನ್ನು ಹುಟ್ಟಿಸುತ್ತವೆ. ಹಾಗಾಗಿ, ಸಾರ್ವಜನಿಕ ಹಿತಾದೃಷ್ಟಿಯಿಂದ ಈ ವಿಷಯವನ್ನು ಇತ್ಯರ್ಥಪಡಿಸಬೇಕಾದ ಅಗತ್ಯವಿದೆ’’ ಎಂದು ಚುನಾವಣಾ ಆಯೋಗ ಹೇಳಿತ್ತು.