ಏಕದಿನ ವಿಶ್ವಕಪ್ ಗೆ ಅಂತಿಮ ತಾಲೀಮು: ಭಾರತ-ಆಸ್ಟ್ರೇಲಿಯ ಸರಣಿ ಶುಕ್ರವಾರ ಆರಂಭ
ಶ್ರೇಯಸ್ ಅಯ್ಯರ್ ಫಿಟ್ನೆಸ್, ಸೂರ್ಯಕುಮಾರ್ ಬ್ಯಾಟಿಂಗ್ ನತ್ತ ಎಲ್ಲರ ಚಿತ್ತ
Photo: X \ @ICC
ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ವಿಶ್ವಕಪ್ ಗೆ ಅಂತಿಮ ತಾಲೀಮು ಎನಿಸಿರುವ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ನಿರ್ಣಾಯಕ ಮೂರು ಪಂದ್ಯಗಳ ಸರಣಿಯು ಶುಕ್ರವಾರ ಮೊಹಾಲಿಯಲ್ಲಿ ಆರಂಭವಾಗಲಿದೆ. ಉಭಯ ತಂಡಗಳು ವಿಶ್ವಕಪ್ ನಲ್ಲಿ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.
ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಭಾರತದ ಮೀಸಲು ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಇದು ಬಹು ಮುಖ್ಯ ಕ್ಷಣವಾಗಿದೆ.
ಈ ಪ್ರಮುಖ ಸರಣಿಯಲ್ಲಿ ಇಬ್ಬರು ಮುಂಬೈ ಮೂಲದ ಬ್ಯಾಟರ್ ಗಳಾದ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವೈಯಕ್ತಿಕ ಹೋರಾಟಕ್ಕೆ ಇಳಿದಿದ್ದಾರೆ.
► ಅಯ್ಯರ್ ಫಿಟ್ನೆಸ್: 28ರ ವಯಸ್ಸಿನ ಶ್ರೇಯಸ್ ಅಯ್ಯರ್ ತನ್ನ ವೃತ್ತಿಜೀವನದಲ್ಲಿ ಕವಲುದಾರಿಯಲ್ಲಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಕಳೆದ ಆರು ತಿಂಗಳುಗಳಿಂದ ಮೈದಾನದಲ್ಲಿ ಅವರು ಹೆಚ್ಚು ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ಮ್ಯಾಚ್ ಫಿಟ್ನೆಸ್ ಬಗ್ಗೆ ಕಳವಳ ಹೆಚ್ಚಾಗಿದೆ. ಪಾಕಿಸ್ತಾನ ವಿರುದ್ಧ ಏಶ್ಯಕಪ್ ಪಂದ್ಯಕ್ಕಿಂತ ಮೊದಲು ಅಯ್ಯರ್ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ 3 ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ಅಯ್ಯರ್ ಗೆ ಹಸಿರು ನಿಶಾನೆ ತೋರಿದ್ದು, ಮುಂದಿನ 5 ದಿನಗಳಲ್ಲಿ 3 ಪಂದ್ಯಗಳಲ್ಲಿ ಆಡುವುದು ಅವರಿಗೆ ಅಗ್ನಿಪರೀಕ್ಷೆಯಾಗಿದೆ.
ಮಧ್ಯಮ ಓವರ್ ಗಳಲ್ಲಿ ಸ್ಪಿನ್ ಬೌಲರ್ ಗಳನ್ನು ಚೆನ್ನಾಗಿ ಎದುರಿಸಬಲ್ಲ ಅಯ್ಯರ್ ಮುಂಬರುವ ವಿಶ್ವಕಪ್ ನಲ್ಲಿ ಭಾರತದ ಅಮೂಲ್ಯ ಆಟಗಾರನಾಗಿದ್ದಾರೆ.
► ಸೂರ್ಯಕುಮಾರ್ ಏಕದಿನ ಆಕಾಂಕ್ಷೆ: ಸ್ಕೈ ಎಂದೇ ಜನಪ್ರಿಯರಾಗಿರುವ ಸೂರ್ಯಕುಮಾರ್ ಯಾದವ್ ಟಿ-20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಆದರೆ ಏಕದಿನ ಕ್ರಿಕೆಟ್ ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಈ ತನಕ 27 ಏಕದಿನ ಪಂದ್ಯಗಳನ್ನು ಆಡಿದ್ದರೂ ಕೂಡ ಅವರ ಬ್ಯಾಟಿಂಗ್ ಸರಾಸರಿ 25ಕ್ಕಿಂತ ಕಡಿಮೆ ಇದೆ. ಇದು 50 ಓವರ್ ಮಾದರಿ ಕ್ರಿಕೆಟ್ ಗೆ ಅವರು ಸೂಕ್ತ ಬ್ಯಾಟರ್ ಆಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.ಯುವ ಪ್ರತಿಭೆ ತಿಲಕ್ ವರ್ಮಾ ಅವರು ಸೂರ್ಯಕುಮಾರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. 33ರ ವಯಸ್ಸಿನ ಯಾದವ್ ಗೆ ಏಕದಿನ ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲು ಇದು ಕೊನೆಯ ಅವಕಾಶವಾಗಿದೆ.
► ಮತ್ತೆ ಅವಕಾಶ ಗಿಟ್ಟಿಸಿಕೊಂಡ ಅಶ್ವಿನ್: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ಗೆ ಸಣ್ಣ ಮಟ್ಟಿನ ಗಾಯವಾದ ಕಾರಣ 37ರ ಹರೆಯದ ಆರ್.ಅಶ್ವಿನ್ ಗೆ ಅನಿರೀಕ್ಷಿತವಾಗಿ ಟೀಮ್ ಇಂಡಿಯಾದ ಬಾಗಿಲು ತೆರೆದಿದೆ. ಅಶ್ವಿನ್ 2022ರ ಜನವರಿಯಿಂದ ಏಕದಿನ ಪಂದ್ಯವನ್ನು ಆಡಿಲ್ಲ. ಒಂದು ವೇಳೆ ಅಕ್ಷರ್ ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳದಿದ್ದರೆ 3ನೇ ಏಕದಿನದ ಜೊತೆಗೆ ಕೊನೆಯ ಬಾರಿ 50 ಓವರ್ ವಿಶ್ವಕಪ್ನಲ್ಲಿ ಅಶ್ವಿನ್ ಆಡುವ ಅವಕಾಶವನ್ನೂ ಪಡೆಯಬಹುದು. ಎರಡು ವಾರಗಳ ಹಿಂದಿನ ತನಕವೂ ಅಶ್ವಿನ್ ಸ್ಪರ್ಧೆಯಲ್ಲಿರಲಿಲ್ಲ. ಇದೀಗ ಅವರು ತಮ್ಮದೇ ರಾಜ್ಯದ ವಾಶಿಂಗ್ಟನ್ ಸುಂದರ್ ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ. ಕುಲದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಅಶ್ವಿನ್ ಹಾಗೂ ಸುಂದರ್ಗೆ ತಂಡದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಇದೊಂದು ಸುವರ್ಣಾಕಾಶವಾಗಿದೆ.
ಪ್ರಸಕ್ತ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅಶ್ವಿನ್ ಮಿಂಚಿದರೂ ಕೂಡ ಅಕ್ಷರ್ ಫಿಟ್ನೆಸ್ ಪಡೆದರೆ ಅವರು ಮತ್ತೆ ಅವಕಾಶ ಪಡೆಯುತ್ತಾರೆ. ಅಕ್ಷರ್ ವಿಶ್ವಕಪ್ ಗಿಂತ ಮೊದಲು ಫಿಟ್ ಆಗುತ್ತಾರೆಂಬ ವಿಶ್ವಾಸದಲ್ಲಿ ಭಾರತವಿದೆ.
► ತಂಡ ಸಂಯೋಜನೆ ಹಾಗೂ ಬೌಲರ್ ಕೆಲಸದ ಭಾರ: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಅವರು ಶುಭಮನ್ ಗಿಲ್ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯನ್ನು ಪರಿಗಣಿಸಿ ವೇಗದ ಬೌಲರ್ ಗಳು ಅದರಲ್ಲೂ ವಿಶೇಷವಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ಅವರ ಕೆಲಸದ ಭಾರವನ್ನು ನಿಭಾಯಿಸುವುದು ಅತ್ಯಂತ ಮುಖ್ಯವಾಗಿದೆ.
ಆಸ್ಟ್ರೇಲಿಯ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು 2-3 ಅಂತರದಿಂದಲೂ ಸೋತಿದ್ದರೂ ಕೂಡ ಬಲಿಷ್ಠ ತಂಡವಾಗಿ ಉಳಿದುಕೊಂಡಿದೆ. ಮಾರ್ಚ್ನಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ಸರಣಿಯನ್ನು ಆಸ್ಟ್ರೇಲಿಯ ಗೆದ್ದುಕೊಂಡಿತ್ತು. ಉಪಖಂಡದ ವಾತಾವರಣದಲ್ಲಿ ಆಸ್ಟ್ರೇಲಿಯದ ಉತ್ತಮ ದಾಖಲೆಯು ವಿಶ್ವಕಪ್ ನಲ್ಲಿ ಅದನ್ನು ಬಲಿಷ್ಠ ಸ್ಪರ್ಧಿಯನ್ನಾಗಿಸಿದೆ. ಭಾರತ ಹಾಗೂ ಆಸ್ಟ್ರೇಲಿಯವು ಅಕ್ಟೋಬರ್ 8ರಂದು ವಿಶ್ವಕಪ್ ನಲ್ಲಿ ಹಣಾಹಣಿ ನಡೆಸಲಿವೆ.
ಉಪಖಂಡದ ಪಿಚ್ ಗಳು ಬ್ಯಾಟರ್ ಗಳಿಗೆ ಫೇವರ್ ಆಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಬೌಲಿಂಗ್ ದಾಳಿಯು ಕಠಿಣ ಪರೀಕ್ಷೆ ಎದುರಿಸಲಿದೆ.
ಪಂದ್ಯದ ಸಮಯ: ಮಧ್ಯಾಹ್ನ 1:30
ಭಾರತ(ಸಂಭಾವ್ಯರು): 1. ಇಶಾನ್ ಕಿಶನ್, 2. ಶುಭಮನ್ ಗಿಲ್, 3. ಶ್ರೇಯಸ್ ಅಯ್ಯರ್, 4. ಸೂರ್ಯಕುಮಾರ್ ಯಾದವ್, 5. ಕೆ.ಎಲ್.ರಾಹುಲ್(ನಾಯಕ, ವಿಕೆಟ್ಕೀಪರ್), 6. ರವೀಂದ್ರ ಜಡೇಜ, 7. ವಾಶಿಂಗ್ಟನ್ ಸುಂದರ್, 8. ಆರ್.ಅಶ್ವಿನ್, 9. ಮುಹಮ್ಮದ್ ಶಮಿ, 10. ಮುಹಮ್ಮದ್ ಸಿರಾಜ್/ಶಾರ್ದೂಲ್ ಠಾಕೂರ್, 11. ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯ(ಸಂಭಾವ್ಯರು): 1. ಡೇವಿಡ್ ವಾರ್ನರ್, 2. ಮಿಚೆಲ್ ಮಾರ್ಷ್, 3. ಸ್ಟೀವನ್ ಸ್ಮಿತ್, 4. ಮಾರ್ನಸ್ ಲ್ಯಾಬುಶೇನ್, 5. ಅಲೆಕ್ಸ್ ಕ್ಯಾರೆ(ವಿಕೆಟ್ಕೀಪರ್), 6. ಕ್ಯಾಮರೂನ್ ಗ್ರೀನ್, 7. ಮಾರ್ಕಸ್ ಸ್ಟೋನಿಸ್, 8. ಪ್ಯಾಟ್ ಕಮಿನ್ಸ್(ನಾಯಕ), 9. ಸ್ಪೆನ್ಸರ್ ಜಾನ್ಸನ್/ತನ್ವೀರ್ ಸಂಘಾ, 10. ಆ್ಯಡಮ್ ಝಾಂಪ, 11. ಜೋಶ್ ಹೇಝಲ್ವುಡ್.
ಪಿಚ್ ಹಾಗೂ ವಾತಾವರಣ
ಮೊಹಾಲಿ ಕ್ರೀಡಾಂಗಣವು 4 ವರ್ಷಗಳಿಂದ ಏಕದಿನ ಕ್ರಿಕೆಟನ್ನು ಆಯೋಜಿಸಿಲ್ಲ. ಆದರೆ, ಐಪಿಎಲ್ ನಲ್ಲಿ ಕೆಲವು ಗರಿಷ್ಠ ಸ್ಕೋರ್ ದಾಖಲಾಗಿದ್ದವು. ಉಷ್ಣ ಹಾಗೂ ಒಣ ಹವೆ ಇರಲಿದೆ ಎಂಬ ಮೂನ್ಸೂಚನೆ ಇದೆ.
ಅಂಕಿ-ಅಂಶ
► ಉಭಯ ತಂಡಗಳು ಮೊಹಾಲಿಯಲ್ಲಿ 2019ರಲ್ಲಿ ಕೊನೆಯ ಬಾರಿ ಆಡಿದ್ದವು. ಆಗ ಆಸ್ಟ್ರೇಲಿಯವು 359 ರನ್ ಗುರಿಯನ್ನು ಪೀಟರ್ ಹ್ಯಾಂಡ್ಸ್ಕಾಂಬ್, ಉಸ್ಮಾನ್ ಖ್ವಾಜಾ ಹಾಗೂ ಅಶ್ಟನ್ ಟರ್ನರ್ ಸಾಹಸದಿಂದ ಚೇಸಿಂಗ್ ಮಾಡಿ 4 ವಿಕೆಟ್ ನಿಂದ ಗೆದ್ದಿತ್ತು.
► ಏಕದಿನ ಕ್ರಿಕೆಟ್ ನಲ್ಲಿ 5,000 ರನ್ ಪೂರೈಸಲು ಸ್ಟೀವನ್ ಸ್ಮಿತ್ ಗೆ 61 ರನ್ ಅಗತ್ಯವಿದೆ.
► ಈ ಹಿಂದೆ ಭಾರತವು ಆಸ್ಟ್ರೇಲಿಯ ತಂಡವನ್ನು ಎದುರಿಸಿದ್ದಾಗ ಸೂರ್ಯಕುಮಾರ್ ಯಾದವ್ ಸತತ ಮೂರು ಬಾರಿ ಶೂನ್ಯ ಸಂಪಾದಿಸಿದ್ದರು.