ಬಂಧನಕ್ಕೊಳಗಾದ ಇಬ್ಬರು ಮುಖ್ಯಮಂತ್ರಿಗಳಿಗೆ ಖಾಲಿ ಕುರ್ಚಿಗಳನ್ನು ಇಟ್ಟು ʼಇಂಡಿಯಾʼ ಒಕ್ಕೂಟ ಪ್ರತಿರೋಧ
ದಿಲ್ಲಿಯಲ್ಲಿ ಇಂಡಿಯಾ ಮೈತ್ರಿಕೂಟದಿಂದ ‘ಪ್ರಜಾತಂತ್ರ ಉಳಿಸಿ’ ಬೃಹತ್ ಸಮಾವೇಶ
Photo: PTI
ಹೊಸದಿಲ್ಲಿ: ಪ್ರಜಾಪ್ರಭುತ್ವದ ಮೇಲಿನ ದಾಳಿಗಳನ್ನು ಪ್ರತಿಭಟಿಸಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ರವಿವಾರ ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ರ್ಯಾಲಿಯು ಭಾರೀ ಸಂಖ್ಯೆಯಲ್ಲಿ ಜನರ ಉಪಸ್ಥಿತಿಯೊಂದಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಿತು. ರ್ಯಾಲಿಯ ಪ್ರಮುಖ ಸಂಘಟಕ ಆಪ್ಗೆ ದಿಲ್ಲಿ ಪೋಲಿಸರು ಕೇವಲ ಷರತ್ತುಬದ್ಧ ಅನುಮತಿಯನ್ನು ನೀಡಿದ್ದರಾದರೂ ಸಾವಿರಾರು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯನ್ನು ನಿಷೇಧಿಸಿದ್ದ ದಿಲ್ಲಿ ಪೋಲಿಸರು, ಟ್ರ್ಯಾಕ್ಟರ್ಗಳು ಮತ್ತು ಟ್ರಾಲರ್ಗಳ ಬಳಕೆಗೆ ಅವಕಾಶ ನೀಡಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರನ್ನು ಸರ್ವಾಧಿಕಾರಿಗೆ ಮತ್ತು ಅವರ ಆಡಳಿತವನ್ನು ಸರ್ವಾಧಿಕಾರಕ್ಕೆ ಹೋಲಿಸಿ ಘೋಷಣೆಗಳು ರ್ಯಾಲಿಯಲ್ಲಿ ಮೊಳಗಿದ್ದವು.
ಮೋದಿಯವರು ಸರ್ವಾಧಿಕಾರಿಯಾಗಿದ್ದಾರೆ ಮತ್ತು ಹೋರಾಟವು ಕೇವಲ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಲ್ಲ, ಅದು ಪ್ರಜಾಪ್ರಭುತ್ವವನ್ನು ಉಳಿಸಲು ದೊಡ್ಡ ಹೋರಾಟವಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ರ್ಯಾಲಿಯಲ್ಲಿ ಮಾತನಾಡಿದ ನಾಯಕರು ಸಮ್ಮಿಶ್ರ ಸರಕಾರವು ಭಾರತವನ್ನು ಮತ್ತು ಅದರ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆಯೇ ಹೊರತು ಏಕ ಪಕ್ಷದ ಆಡಳಿತವಲ್ಲ ಎಂದು ಪ್ರತಿಪಾದಿಸಿದರು.
ಕಳೆದ ವರ್ಷದ ಚಳಿಗಾಲದಲ್ಲಿ ಪಾಟ್ನಾದಲ್ಲಿ ಶಕ್ತಿ ಪ್ರದರ್ಶನದ ಬಳಿಕ ಇದು ಇಂಡಿಯಾ ಮೈತ್ರಿಕೂಟದ ಮೊದಲ ಮಹತ್ವದ ರ್ಯಾಲಿಯಾಗಿದೆ. ಮಾ.17ರಂದು ಮುಂಬೈನಲ್ಲಿ ನಡೆದಿದ್ದ ಬಹಿರಂಗ ಸಭೆಯಲ್ಲಿ ಹಲವಾರು ಇಂಡಿಯಾ ನಾಯಕರು ಒಂದೇ ವೇದಿಕೆಯಲ್ಲಿ ಜೊತೆಗೂಡಿದ್ದರು,ಆದರೆ ಆ ಸಭೆಯು ಪ್ರಮುಖವಾಗಿ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯ ಸಮಾರೋಪದೊಂದಿಗೆ ಗುರುತಿಸಿಕೊಂಡಿತ್ತು. ಇಂದಿನದು ಇಂಡಿಯಾ ಮೈತ್ರಿಕೂಟದ ಇಬ್ಬರು ಮುಖ್ಯಮಂತ್ರಿಗಳಾದ ಹೇಮಂತ ಸೊರೇನ್ ಮತ್ತು ಅರವಿಂದ ಕೇಜ್ರಿವಾಲ್ ಅವರ ಬಂಧನದ ಬಳಿಕ ಇಂತಹ ಮೊದಲ ಸಮಾವೇಶವಾಗಿದೆ.
ಕೇಜ್ರಿವಾಲ್ ಮತ್ತು ಸೊರೇನ್ ಅವರನ್ನು ಹೊರತುಪಡಿಸಿ ಎಲ್ಲ ಇಂಡಿಯಾ ನಾಯಕರು ರ್ಯಾಲಿಯಲ್ಲಿ ಉಪಸ್ಥಿತರಿದ್ದರು. ಉಭಯ ಮುಖ್ಯಮಂತ್ರಿಗಳ ಬಂಧನಕ್ಕೆ ಪ್ರತಿಭಟನೆಯ ಸಂಕೇತವಾಗಿ ಕೇಜ್ರಿವಾಲ್ ಮತ್ತು ಸೊರೇನ್ ಅವರಿಗಾಗಿ ವೇದಿಕೆಯ ಮೊದಲ ಸಾಲಿನಲ್ಲಿ ಎರಡು ಖಾಲಿ ಕುರ್ಚಿಗಳನ್ನು ಇರಿಸಲಾಗಿತ್ತು. ಕೇಜ್ರಿವಾಲ್,ಸೊರೇನ್,ಸಂಜಯ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಅವರ ಪತ್ನಿಯರೂ ಉಪಸ್ಥಿತರಿದ್ದರು.
ಸುನೀತಾ ಕೇಜ್ರಿವಾಲ್ ಅವರು ಕೇಜ್ರಿವಾಲ್ರ ಸಂದೇಶವನ್ನು ಓದಿದರು. ‘ಬಡವರು ಅಥವಾ ಶ್ರೀಮಂತರು ಎಂಬ ಭೇದವಿಲ್ಲದೆ ಎಲ್ಲತಿಗೂ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸುವ ಭಾರತದ ಬಗ್ಗೆ ನಾನು ಕನಸು ಕಾಣುತ್ತಿರುತ್ತೇನೆ ’ ಎಂದು ಕೇಜ್ರಿವಾಲ್ ತನ್ನ ಸಂದೇಶದಲ್ಲಿ ಹೇಳಿದ್ದರು.
ರ್ಯಾಲಿಯಲ್ಲಿ ಪಾಲ್ಗೊಂಡ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸೋನಿಯಾ ಗಾಂಧಿ,ಶರದ ಪವಾರ್, ಅಖಿಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ತೇಜಸ್ವಿ ಯಾದವ್, ಡಿ.ರಾಜಾ, ಸೀತಾರಾಮ ಯೆಚೂರಿ, ಉದ್ಧವ ಠಾಕ್ರೆ, ಡೆರೆಕ್ ಒ’ಬ್ರಿಯಾನ್, ಮೆಹಬೂಬ ಮುಫ್ತಿ, ತಿರುಚ್ಚಿ ಶಿವ, ದೀಪಂಕರ ಭಟ್ಟಾಚಾರ್ಯ ಮತ್ತು ಥೋಲ್ ಮುರುಗನ್ ಅವರು ಸೇರಿದ್ದರು.