ʼವೈದ್ಯರ ನಿರ್ಲಕ್ಷ್ಯದಿಂದ ಮಗು ಹಾಗೂ ಪತ್ನಿಯನ್ನು ಕಳೆದುಕೊಂಡೆʼ : ಸಂತ್ರಸ್ತ ಆರೋಪ
ನಾಂದೇಡ್ ಸರ್ಕಾರಿ ಆಸ್ಪತ್ರೆ ದುರಂತ
Photo: NDTV
ನಾಂದೇಡ್: ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ 31 ಜನರ ಮೃತ್ಯುವಿನ ಪೈಕಿ ತನ್ನ ನವಜಾತ ಶಿಶುವನ್ನೂ ಕಳೆದುಕೊಂಡಿರುವ ವ್ಯಕ್ತಿಯೊಬ್ಬರು, ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ನಷ್ಟ ಸಂಭವಿಸಿದೆ ಎಂದು ಆರೋಪಿಸಿದ್ದಾರೆ ಎಂದು devdiscourse.com ವರದಿ ಮಾಡಿದೆ.
ತನ್ನ ನವಜಾತ ಶಿಶುವು ಜನಿಸಿದಾಗ ಅದು ನಿಗದಿತ ತೂಕಕ್ಕಿಂತ ಕಡಿಮೆ ಇರಲಿಲ್ಲವೆಂದೂ ದುಃಖಪೀಡಿತ ನಾಗೇಶ್ ಸೋಲಂಕೆ ದೂರಿದ್ದಾರೆ. ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ನನ್ನ ಪತ್ನಿಯು ಸಿಸೇರಿಯನ್ ಶಸ್ತ್ರಚಿಕಿತ್ಸೆ ವಿಧಾನದ ಮೂಲಕ ಗರ್ಭಧಾರಣೆಗೆ ಒಳಗಾಗಿದ್ದಳು. ನಂತರ ಮಗುವನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು ಎಂದೂ ಆ ವ್ಯಕ್ತಿ ಪ್ರತಿಪಾದಿಸಿದ್ದಾರೆ.
ಸೆಪ್ಟೆಂಬರ್ 30ರಿಂದ ಕಳೆದ 48 ಗಂಟೆಗಳಲ್ಲಿ ನಾಂದೇಡ್ ಜಿಲ್ಲೆಯ ಡಾ. ಶಂಕರ್ ರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ಮರಣಗಳು ದಾಖಲಾಗಿವೆ.
ಸೆಪ್ಟೆಂಬರ್ 30ರಿಂದ ಅಕ್ಟೋಬರ್ 1ರ ನಡುವೆ 12 ನವಜಾತ ಶಿಶುಗಳು ಸೇರಿ ಮೃತಪಟ್ಟಿರುವ 24 ರೋಗಿಗಳ ಪೈಕಿ ಸೋಲಂಕೆಯ ನವಜಾತ ಶಿಶು ಕೂಡಾ ಸೇರಿದೆ. ಅಕ್ಟೋಬರ್ 1ರಿಂದ 2ರ ನಡುವೆ ಮತ್ತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನನ್ನ ಮಗುವು ನಿಗದಿತ ತೂಕಕ್ಕಿಂತ ಕಡಿಮೆ ಇರಲಿಲ್ಲ ಹಾಗೂ ತುಂಬಾ ಆರೋಗ್ಯಕರವಾಗಿ ಜನಿಸಿತ್ತು. ಆದರೆ, ನನ್ನ ಮಗುವಿಗೆ ಏನಾಯಿತು ಎಂಬುದು ಈಗಾಗಲಿ ಅಥವಾ ಮುಂದಾಗಲಿ ತಿಳಿಯಲು ಸಾಧ್ಯವಿಲ್ಲ. ನಾನು ನನ್ನ ಮಗುವನ್ನು ಕಳೆದುಕೊಂಡೆ. ನನ್ನ ಪತ್ನಿಯು ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದಾಗಿ ಶಾಶ್ವತ ಹಾನಿ ಅನುಭವಿಸಿದ್ದಾಳೆ. ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ” ಎಂದು ಸೋಲಂಕೆ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂದೆ, ಮಂಗಳವಾರ ಆಸ್ಪತ್ರೆಯಲ್ಲಿ ಸಂಭವಿಸಿರುವ ಮೃತ್ಯುಗಳನ್ನು ನಮ್ಮ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ವಿವರವಾದ ತನಿಖೆ ನಡೆದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿರುವ ಅವರು, ಆಸ್ಪತ್ರೆಯಲ್ಲಿ ಔಷಧ ಹಾಗೂ ಸಿಬ್ಬಂದಿಗಳ ಕೊರತೆಯಿತ್ತು ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ.