ಬೆತ್ತಲೆ ಮೆರವಣಿಗೆ ಮಾಡಿದ ಗಲಭೆಕೋರರ ಗುಂಪಿನ ಕೈಗೆ ಇಬ್ಬರು ಕುಕಿ ಮಹಿಳೆಯರನ್ನು ತಲುಪಿಸಿದ್ದೇ ಮಣಿಪುರ ಪೊಲೀಸರು!
ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿದೆ ಆಘಾತಕಾರಿ ಅಂಶ…
ಸಾಂದರ್ಭಿಕ ಚಿತ್ರ | PHOTO : PTI
ಇಂಫಾಲ : ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಪೊಲೀಸ್ ಜಿಪ್ಸಿಯಲ್ಲಿ ಆಶ್ರಯ ಪಡೆದಿದ್ದ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಮಣಿಪುರ ಪೊಲೀಸ್ ಸಿಬ್ಬಂದಿ ಸುಮಾರು 1,000 ಮೈಥೇಯಿ ಗಲಭೆಕೋರರ ಗುಂಪಿನ ಕೈಗೆ ತಲುಪಿಸಿದ್ದರು ಎಂಬ ಆಘಾತಕಾರಿ ಅಂಶವನ್ನು ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಲಾಯಿತು ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ಕಾರ್ಗಿಲ್ ಯುದ್ಧದ ಯೋಧನ ಪತ್ನಿಯಾಗಿದ್ದ ಸಂತ್ರಸ್ತ ಮಹಿಳೆಯೊಬ್ಬರು ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಪೊಲೀಸ್ ಸಿಬ್ಬಂದಿಯನ್ನು ಪರಿಪರಿಯಾಗಿ ವಿನಂತಿಸಿಕೊಂಡರೂ, ವಾಹನದ ಚಾವಿ ಇಲ್ಲ ಎಂದ ಪೊಲೀಸರು ಯಾವುದೇ ಸಹಾಯ ಮಾಡಲಿಲ್ಲ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
2023ರ ಮೇ 4 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಸುಮಾರು ಎರಡು ತಿಂಗಳ ನಂತರ ಜುಲೈನಲ್ಲಿ ಪುರುಷರ ಗುಂಪಿನಿಂದ ಸುತ್ತುವರಿದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು.
ಕಳೆದ ವರ್ಷ ಅಕ್ಟೋಬರ್ 16 ರಂದು ಗುವಾಹಟಿಯ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ಸಿಬಿಐ ಆರು ಆರೋಪಿಗಳ ವಿರುದ್ಧ ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಒಬ್ಬ ಅಪ್ರಾಪ್ತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸುಮಾರು 900-1,000 ಮಂದಿ ಗಲಭೆಕೋರರ ಗುಂಪಿನಿಂದ ಇಬ್ಬರು ಮಹಿಳೆಯರು ತಪ್ಪಿಸಿಕೊಂಡು ರಕ್ಷಣೆಗೆ ಪೊಲೀಸರ ಬಳಿಗೆ ಹೋಗಿದ್ದರು ಎಂದು ಸಿಬಿಐ ಆರೋಪಿಸಿದೆ.
ಸೈಕುಲ್ ಪೊಲೀಸ್ ಠಾಣೆಯಿಂದ ದಕ್ಷಿಣಕ್ಕೆ 68 ಕಿಮೀ ದೂರದಲ್ಲಿರುವ ಕಾಂಗ್ಪೋಕ್ಪಿ ಜಿಲ್ಲೆಯ ಸಂತ್ರಸ್ತೆಯರ ಗ್ರಾಮಕ್ಕೆ ಗಲಭೆಕೋರರಿದ್ದ ಗುಂಪು ಬಲವಂತವಾಗಿ ಪ್ರವೇಶಿಸಿತ್ತು ಎಂದು ಸಿಬಿಐ ಹೇಳಿದೆ.
ಸಂತ್ರಸ್ತ ಮಹಿಳೆಯು ಗಲಭೆಕೋರರಿಂದ ತಪ್ಪಿಸಿಕೊಳ್ಳಲು ಇತರ ಮಹಿಳೆಯರೊಂದಿಗೆ ಕಾಡಿಗೆ ಓಡಿಹೋದರು. ಆಕೆ ತನ್ನ ಪ್ರಯತ್ನದಲ್ಲಿ ವಿಫಲವಾಗಿ ಮಹಿಳೆಯರ ಗುಂಪಿನಿಂದ ಬೇರ್ಪಟ್ಟಿರುವುದನ್ನು ಗಲಭೆಕೋರರು ಗಮನಿಸಿದರು. ಗಲಭೆಕೋರರ ಗುಂಪಿನಲ್ಲಿದ್ದ ಕೆಲವರು ರಕ್ಷಣೆಗಾಗಿ ಸಹಾಯ ಪಡೆಯಲು ರಸ್ತೆಬದಿಯಲ್ಲಿ ನಿಂತಿದ್ದ ಪೊಲೀಸ್ ವಾಹನದ ಬಳಿ ತಲುಪಲು ಮಹಿಳೆಯರಿಗೆ ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಕುಳಿತಿದ್ದ ವಾಹನದೊಳಗೆ ಇಬ್ಬರು ಮಹಿಳೆಯರು ಪ್ರವೇಶಿಸುವಲ್ಲಿ ಯಶಸ್ವಿಯಾದರು. ವಾಹನದ ಹೊರಗೂ ಮೂರ್ನಾಲ್ಕು ಸಿಬ್ಬಂದಿಗ ಇದ್ದರು ಎಂದು ತಿಳಿದು ಬಂದಿದೆ.
ಪುರುಷ ಸಂತ್ರಸ್ತರೊಬ್ಬರೂ ವಾಹನದೊಳಗೆ ಸೇರಿಕೊಳ್ಳುವಲ್ಲಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ವಾಹನ ಚಾಲಕನಿಗೆ ಪರಿ ಪರಿಯಾಗಿ ಮನವಿ ಮಾಡಿದರೂ, ಸಹಾಯ ಮಾಡದ ಪೊಲೀಸರು ತಮ್ಮ ಬಳಿ ವಾಹನ ಚಾವಿಯಿಲ್ಲ ಎಂದು ಹೇಳಿದ್ದರು!
ಸಂತ್ರಸ್ತೆಯೊಬ್ಬರ ಪತಿ ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್ನ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ವಾಹನದಲ್ಲಿ ಕುಳಿತಿದ್ದ ಪುರುಷ ಸಂತ್ರಸ್ತನ ತಂದೆಗೆ ಗಲಭೆಕೋರರಿಂದ ಹಲ್ಲೆಯಾಗದಂತೆಯೂ ಪೊಲೀಸರು ಸಹಾಯ ಮಾಡಲಿಲ್ಲ ಎಂದು ಸಿಬಿಐ ಆರೋಪಿಸಿದೆ.
ನಂತರ, ಪೊಲೀಸ್ ಜಿಪ್ಸಿಯ ಚಾಲಕ ಸುಮಾರು 1,000 ಜನರಿರುವ ಗಲಭೆಕೋರರ ಗುಂಪಿನ ಕಡೆಗೆ ವಾಹನವನ್ನು ಚಲಾಯಿಸಿ ಅವರ ಮುಂದೆ ನಿಲ್ಲಿಸಿದ ಎನ್ನಲಾಗಿದೆ. ಸಂತ್ರಸ್ತರು ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವಂತೆ ಪೊಲೀಸ್ ಸಿಬ್ಬಂದಿಯನ್ನು ಹತಾಶರಾಗಿ ಕೇಳಿಕೊಂಡರೂ ಪೊಲೀಸರು ಯಾವುದೇ ಸಹಾಯವನ್ನು ಮಾಡಲಿಲ್ಲ ಎಂದು ತಿಳಿದು ಬಂದಿದೆ.
ಇಬ್ಬರು ಮಹಿಳೆಯರೊಂದಿಗೆ ಜಿಪ್ಸಿಯಲ್ಲಿ ಕುಳಿತಿದ್ದ ಪುರುಷ ಸಂತ್ರಸ್ತನ ತಂದೆಯನ್ನು ಗಲಭೆಕೋರರ ಗುಂಪು ಹತ್ಯೆ ಮಾಡಿತ್ತು ಎಂದು ಸಿಬಿಐ ತಿಳಿಸಿದೆ. ಹಿಂಸಾತ್ಮಕ ಗುಂಪು ವಾಹನದ ಕಡೆಗೆ ಬಂದಾಗ ಸಂತ್ರಸ್ತರನ್ನು ಬಿಟ್ಟು ಘಟನಾ ಸ್ಥಳದಿಂದ ಪೊಲೀಸ್ ಸಿಬ್ಬಂದಿ ಓಡಿ ಹೋದರು ಎನ್ನಲಾಗಿದೆ. ಗಲಭೆಕೋರರು ಮಹಿಳೆಯರನ್ನು ಹೊರಗೆ ಎಳೆದೊಯ್ದು, ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಮೊದಲು ಬೆತ್ತಲೆ ಮೆರವಣಿಗೆ ಮಾಡಿದರು ಎಂದು ಚಾರ್ಜ್ ಶೀಟ್ ಹೇಳಿದೆ.
ಘಟನೆ ಕುರಿತು ಜುಲೈನಲ್ಲಿ ಮಣಿಪುರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಹುಯಿರೆಮ್ ಹೆರೋದಾಸ್ ಮೈಥೇಯಿ ಮತ್ತು ಇತರ ಐವರನ್ನು ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಾಪರಾಧಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಕೊಲೆ, ಮಹಿಳೆಯ ಮಾನಹಾನಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.