ಡ್ರೆಸ್ಸಿಂಗ್ ರೂಂನಲ್ಲಿ ಕ್ರಿಕೆಟ್ ಆಟಗಾರರೊಂದಿಗೆ ನಿಮ್ಮ ಸಾಧನೆಯನ್ನು ಹಂಚಿಕೊಳ್ಳಿ : ಅರ್ಶದ್ ನದೀಮ್ ಗೆ ಆಹ್ವಾನ ನೀಡಿದ ಪಾಕ್ ಕೋಚ್
ಜಾಸನ್ ಗಿಲೆಸ್ಪಿ , ಅರ್ಶದ್ ನದೀಮ್ | PTI
ಲಾಹೋರ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ, ಒಲಿಂಪಿಕ್ ದಾಖಲೆಯೊಂದಿಗೆ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿರುವ ಪಾಕಿಸ್ತಾನದ ಅತ್ಲೀಟ್ ಅರ್ಶದ್ ನದೀಮ್ ರನ್ನು ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಜಾಸನ್ ಗಿಲೆಸ್ಪಿ ಪಾಕಿಸ್ತಾನ ತಂಡದ ಡ್ರೆಸಿಂಗ್ ಕೋಣೆಗೆ ಆಹ್ವಾನಿಸಿದ್ದಾರೆ.
‘‘ಅವರ ಚಿನ್ನದ ಪದಕವು ತಂಡಕ್ಕೆ ಅಮೋಘ ಪ್ರೇರಣೆಯನ್ನು ನೀಡಲಿದೆ’’ ಎಂದು ಹೇಳಿರುವ ಗಿಲೆಸ್ಪಿ, ಪಾಕಿಸ್ತಾನದ ಡ್ರೆಸಿಂಗ್ ಕೋಣೆಗೆ ಭೇಟಿ ನೀಡುವಂತೆ ನದೀಮ್ ರಿಗೆ ಬಹಿರಂಗ ಆಹ್ವಾನವನ್ನು ಕಳುಹಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ನದೀಮ್ 92.97 ಮೀಟರ್ ದೂರ ಈಟಿ ಎಸೆದು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಭಾರತದ ನೀರಜ್ ಚೋಪ್ರಾ ಬೆಳ್ಳಿ ಪಡೆದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಪಾಡ್ ಕಾಸ್ಟ್ನಲ್ಲಿ ಮಾತನಾಡಿದ ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್, ನದೀಮ್ ರಿಗೆ ಬಹಿರಂಗ ಆಹ್ವಾನ ನೀಡಿದರು.
‘‘ಡ್ರೆಸಿಂಗ್ ಕೋಣೆಗೆ ಅರ್ಶದ್ ನದೀಮ್ ರನ್ನು ಆಹ್ವಾನಿಸಲು ನಾವು ಬಯಸುತ್ತೇವೆ. ಒಲಿಂಪಿಕ್ಸ್ ವೇಳೆ, ನದೀಮ್ರನ್ನು ನಮ್ಮ ಆಟಗಾರರು ಪ್ರೋತ್ಸಾಹಿಸುತ್ತಿರುವುದನ್ನು ನಾನು ನೋಡಿದ್ದೇನೆ. ಅವರು ತನ್ನ ಚಿನ್ನದ ಪದಕದೊಂದಿಗೆ ಡ್ರೆಸಿಂಗ್ ಕೋಣೆಗೆ ಭೇಟಿ ನೀಡಿದರೆ, ಅದು ತಂಡಕ್ಕೆ ಅಮೋಘ ಚೇತೋಹಾರಿ ಸಂದೇಶವೊಂದನ್ನು ನೀಡುತ್ತದೆ’’ ಎಂದು ಗಿಲೆಸ್ಪಿ ಹೇಳಿದರು.